ಸಾರಾಂಶ
ಯಾದಗಿರಿ ನಗರದ ಹೊರವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲಾವರಣದಲ್ಲಿ ಜಿಲ್ಲೆಯ ಶಾಲೆಗಳ ಮುಖ್ಯೋಪಾಧ್ಯಯರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ಪರ್ಧಾತ್ಮಕ ಯುಗದಲ್ಲಿ ದೇಶಕ್ಕೆ ಒಳ್ಳೆಯ ನಾಗರಿಕರನ್ನು ನೀಡುವ ಶಕ್ತಿ ಹೊಂದಿರುವ ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಖಂಡಿತ ಬದಲಾವಣೆ ಕಾಣಬಹುದು. ಈ ನಿಟ್ಟಿನಲ್ಲಿ ನೀವು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವಿಷಯ ಸಂಪನ್ಮೂಲ ವ್ಯಕ್ತಿ ಮಹೇಶ ಮಾಶಾಳ ಹೇಳಿದರು.ನಗರದ ಹೊರವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲಾವರಣದಲ್ಲಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕಾಡೆಮಿ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಹಾಗೂ ಇತರ ಶೈಕ್ಷಣಿಕ ವಿಷಯಗಳ ಕುರಿತು ಜಿಲ್ಲೆಯ ಶಾಲೆಗಳ ಮುಖ್ಯೋಪಾಧ್ಯಯರಿಗಾಗಿ ಒಂದು ದಿನದ ಕಾರ್ಯಾಗಾರ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ನಮ್ಮೆಲ್ಲರಿಗೆ ಹುಟ್ಟು ಆಕಸ್ಮಿಕ, ನಮಗೆ ತಿಳಿದಿಲ್ಲ. ಸಾವು ಕೂಡ ಅಷ್ಟೇ ನಿಶ್ಚಿತ. ಅದರ ಮಧ್ಯೆ ಇರುವ ಸಮಯವನ್ನು ಒಳ್ಳೆಯ ಕೆಲಸಕ್ಕಾಗಿ ಉಪಯೋಗ ಮಾಡಿಕೊಂಡು ಸಾಧನೆ ಮಾಡಬೇಕು. ಆದರೆ, ಇಂದು ನಾವು ನಮ್ಮ ಮಕ್ಕಳ ಮೇಲೆ ಶೈಕ್ಷಣಿಕ ಅಭ್ಯಾಸದ ಒತ್ತಡ ಹಾಕುತ್ತಿದ್ದೇವೆ ಹೊರತು, ಅವರಿಗೆ ಹೊರ ಜಗತ್ತಿನ ಪರಿಚಯ ಮಾಡಿಸುತ್ತಿಲ್ಲ ಎಂದ ಅವರು, ಅವರನ್ನು ನಾವು ಧೈರ್ಯವಂತರನ್ನಾಗಿ ನಿರ್ಮಾಣ ಮಾಡುವುದು ಅವಶ್ಯ ಎಂದರು.ಶಾಲಾ-ಕಾಲೇಜುಗಳ ಅಧ್ಯಯನ ಸಮಯದಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನದಲ್ಲಿ ಜೀವನ ಕಳೆಯುತ್ತಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ, ನಾವು ಅವರನ್ನು ಸನ್ಮಾರ್ಗದಲ್ಲಿ ತರಲು ಯತ್ನಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಜಿಪಂ ಸಿಇಒ ಗರೀಮಾ ಪನ್ವಾರ್ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಾಗುತ್ತಿರುವ ಶಾಲೆಗಳ ಸಂಖ್ಯೆ ಹೆಚ್ಚಬೇಕು. ಇದು ಇತರ ಶಾಲೆಗಳ ಮೇಲೆ ಪರಿಣಾಮ ಬೀರುತ್ತದೆ,. ಈ ನಿಟ್ಟಿನಲ್ಲಿ ಶಾಲೆಗಳ ಮುಖ್ಯೋಪಾಧ್ಯಯರು ಬದಲಾವಣೆ ತರಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.ಸರ್ಕಾರಗಳು ಶೈಕ್ಷಣಿಕ ಬದಲಾವಣೆಗಾಗಿ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳ ಅನುಷ್ಠಾನ ಜವಾಬ್ದಾರಿ ನಿಮ್ಮ ಮೇಲಿದೆ, ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ, ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.
ಕಾಡೆಮಿಯ ಅಧ್ಯಕ್ಷ ಸುಧಾಕರರಡ್ಡಿ ಮಾಲಿಪಾಟೀಲ್ ಅನಪೂರ, ಪ್ರಾಂಶುಪಾಲ ಪಿ. ಅರವಿಂದಾಕ್ಷಣ, ವೆಂಕಟರಡ್ಡಿ ಪಾಟೀಲ್ ಇದ್ದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.