ಗೋಪಿನಾಥ್ ಅಮಾನತು, ಭ್ರಷ್ಟಾಚಾರ ತನಿಖೆಗೆ ಆದೇಶ ಸ್ವಾಗತಾರ್ಹ: ಆರ್.ಶಿವಣ್ಣ

| Published : Feb 18 2024, 01:33 AM IST

ಗೋಪಿನಾಥ್ ಅಮಾನತು, ಭ್ರಷ್ಟಾಚಾರ ತನಿಖೆಗೆ ಆದೇಶ ಸ್ವಾಗತಾರ್ಹ: ಆರ್.ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಅವರನ್ನು ಸರ್ಕಾರ ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ಗೋಪಿನಾಥ್ ಅವರು ಇಲಾಖೆಯ ಆಹಾರ ಮತ್ತು ಇತರೆ ಸಾಮಗ್ರಿಗಳ ಪೂರೈಕೆ ಟೆಂಡರ್‌ನಲ್ಲಿ ಕೋಟ್ಯಂತರ ರು.ಗಳ ಭ್ರಷ್ಟಾಚಾರ ಎಸಗಿದ್ದು, ಅದನ್ನು ಬಯಲಿಗೆಳೆದಿದ್ದೆ. ಈ ಬಗ್ಗೆ ಸರ್ಕಾರಕ್ಕೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಆಧಾರ ಸಮೇತ ದೂರು ನೀಡಿದ್ದೆ. ಇದನ್ನು ಗಮನಿಸಿದ ಸಚಿವರು ಗೋಪಿನಾಥ್ ಅವರನ್ನು ಅಮಾನತುಪಡಿಸಿ, ತನಿಖೆಗೆ ಆದೇಶ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಶಿವಣ್ಣ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಅವರನ್ನು ಸರ್ಕಾರ ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೋಪಿನಾಥ್ ಅವರು ಇಲಾಖೆಯ ಆಹಾರ ಮತ್ತು ಇತರೆ ಸಾಮಗ್ರಿಗಳ ಪೂರೈಕೆ ಟೆಂಡರ್‌ನಲ್ಲಿ ಕೋಟ್ಯಂತರ ರು.ಗಳ ಭ್ರಷ್ಟಾಚಾರ ಎಸಗಿದ್ದು, ಅದನ್ನು ಬಯಲಿಗೆಳೆದಿದ್ದೆ. ಈ ಬಗ್ಗೆ ಸರ್ಕಾರಕ್ಕೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಆಧಾರ ಸಮೇತ ದೂರು ನೀಡಿದ್ದೆ. ಇದನ್ನು ಗಮನಿಸಿದ ಸಚಿವರು ಗೋಪಿನಾಥ್ ಅವರನ್ನು ಅಮಾನತುಪಡಿಸಿ, ತನಿಖೆಗೆ ಆದೇಶ ನೀಡಿದ್ದಾರೆ. ಅವರನ್ನು ಶಿಕ್ಷೆಯ ವರ್ಗಾವಣೆ ಕೂಡ ಮಾಡಲಾಗಿದೆ. ಇದು ಸ್ವಾಗತಾರ್ಹ ಮತ್ತು ಸರ್ಕಾರಕ್ಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಅಭಿನಂದನೆ ಎಂದರು.

ಅಡುಗೆ ಕೆಲಸದಾಕೆ ಕಂಪ್ಯೂಟರ್‌ ಆಪರೇಟರ್‌!:

ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಉಷಾ ಕೂಡ ಇದ್ದಾರೆ. ಇವರು ಉಪನಿರ್ದೇಶಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದಾರೆ. ಆದರೆ, ಮೂಲತಃ ಕುಂಸಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕಾಯಂ ಅಡುಗೆ ಕೆಲಸದವರಾಗಿದ್ದರೂ, ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಉಪನಿರ್ದೇಶಕರ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸುಳ್ಳು ವರದಿ ನೀಡಿದ್ದಾರೆ. ಅಡುಗೆ ಕೆಲಸದವರಾದ ಅವರನ್ನು ಕಂಪ್ಯೂಟರ್ ಆಪರೇಟರ್ ಆಗಿಸಿರುವುದು ಕೂಡ ಸರಿಯಲ್ಲ ಎಂದು ಹೇಳಿದರು.

ಅಲ್ಲದೇ, ಉಷಾ ತಾಯಿ ಗಿರಿಜಮ್ಮ ಅವರ ಹೆಸರಲ್ಲಿ ಎಸ್.ಜೆ. ಎಂಟರ್‌ಪ್ರೈಸಸ್ ಸಂಸ್ಥೆ ನೋಂದಾವಣೆ ಮಾಡಿ, ಅವರಿಗೆ ಟೆಂಡರ್ ನೀಡಲಾಗಿದೆ. ಉಷಾ ಅವರ ತಾಯಿ ಕೂಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ, ಸರ್ಕಾರಿ ಕೆಲಸದಲ್ಲಿ ಇದ್ದರೂ ನಿಯಮಗಳನ್ನು ಮೀರಿ ಈ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಆದ್ದರಿಂದ ಉಷಾ ಅವರನ್ನು ಕೂಡ ಅಮಾನತು ಮಾಡಬೇಕು. ಗೋಪಿನಾಥ್ ಅವರ ಸಹೋದರಿ ಸೆಲ್ವರಾಜ್ ಶರ್ಮಿಳಾ ಅವರ ಸಂಸ್ಥೆ ಮೇಲೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಉಪನಿರ್ದೇಶಕರನ್ನೂ ಅಮಾನತುಪಡಿಸಿ:

ಇದರ ಜೊತೆಗೆ ಗೋಪಿನಾಥ್ ಅವರನ್ನು ರಕ್ಷಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಅವರೇ ನಿಂತಿದ್ದಾರೆ. ಅವರನ್ನು ವರದಿ ನೀಡುವಂತೆ ನಿಯೋಜಿಸಲಾಗಿತ್ತು. ಆದರೆ, ಮಲ್ಲೇಶಪ್ಪ ಅವರು ಆರೋಪಿಗಳ ಪರವಾಗಿ ನಿಂತು, ಭ್ರಷ್ಟಾಚಾರಕ್ಕೆ ಬೆಂಬಲ ಎನ್ನುವಂತೆ ಸುಳ್ಳು ವರದಿ ಸಲ್ಲಿಸಿದ್ದಾರೆ. ಈ ರೀತಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಸುಳ್ಳು ವರದಿ ನೀಡಿರುವ ಮಲ್ಲೇಶಪ್ಪ ಅವರನ್ನು ಕೂಡ ಅಮಾನತು ಮಾಡಬೇಕು ಎಂದರು.

4 ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಲಿ:

ಟೆಂಡರ್ ಪಡೆದು ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಪೂರೈಸದೇ ಬಿಲ್ ಪಡೆದಿರುವ ಎಸ್.ಜೆ. ಎಂಟರ್ ಪ್ರೈಸಸ್, ಪ್ರಕೃತಿ ಟ್ರೇಡರ್ಸ್, ರಜತಾದ್ರಿ ಎಂಟರ್ ಪ್ರೈಸಸ್, ಜಿ.ಕೆ. ಟ್ರೇಡರ್ಸ್ ಈ ನಾಲ್ಕೂ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟು ಸಾಮಗ್ರಿ ಸರಬರಾಜು ಮಾಡದೇ ಪಡೆದು ಕೊಂಡಿರುವ ಮೊತ್ತವನ್ನು ಸರ್ಕಾರಕ್ಕೆ ಕಟ್ಟಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.