ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು: ನ್ಯಾ. ಕವಿತಾ

| Published : Oct 15 2025, 02:08 AM IST

ಸಾರಾಂಶ

ಪೋಷಕರು ತಮ್ಮ ಜವಾಬ್ದಾರಿ ಅರ್ಥಮಾಡಿಕೊಂಡು, ಮಕ್ಕಳಿಗೆ ಸರಿ ತಪ್ಪು ಕಾರ್ಯಗಳ ಕುರಿತು ಅರಿವು ಮೂಡಿಸುವುದರಿಂದ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗಲಿದೆ.

ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ

ಕನ್ನಡಪ್ರಭ ವಾರ್ತೆ ಕಾರವಾರ

ಪೋಷಕರು ತಮ್ಮ ಜವಾಬ್ದಾರಿ ಅರ್ಥಮಾಡಿಕೊಂಡು, ಮಕ್ಕಳಿಗೆ ಸರಿ ತಪ್ಪು ಕಾರ್ಯಗಳ ಕುರಿತು ಅರಿವು ಮೂಡಿಸುವುದರಿಂದ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ತಿಳಿಸಿದರು.

ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಭವನದಲ್ಲಿ ನಡೆದ ಬಾಲನ್ಯಾಯ ಕಾಯ್ದೆ-2015, ಪೋಕ್ಸೋ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ2006 ಕುರಿತು ಭಾಗೀದಾರರಿಗೆ ಹಾಗೂ ಅನುಷ್ಠಾನಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಪುರುಷ ಪ್ರಧಾನ ಸಮಾಜ ಎಂಬ ಭಾವನೆ ಇರುವುದರಿಂದ ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮನಸ್ಸಿನ ಮೇಲೆ ಹಿಡಿತವಿಲ್ಲದೆ ಇರುವುದರಿಂದ ಕೂಡಾ ದೌರ್ಜನ್ಯಗಳು ನಡೆಯುತ್ತಿವೆ. ಈ ದೌರ್ಜನ್ಯ ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸುವ

ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅನುಷ್ಠಾನಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಾಲ್ಯವಿವಾಹ ತಡೆಗಟ್ಟಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಮಾತನಾಡಿ, ಕಾನೂನು ಪಾಲನೆ, ನೊಂದವರಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತರೆ ಸಮಾಜದ ಶತ್ರುಗಳಾಗಿ ಉಳಿಯುತ್ತೇವೆ. ಹಾಗಾಗಿ ನಮ್ಮ ಕರ್ತವ್ಯ ಪಾಲನೆ ಮಾಡಬೇಕು. ಪ್ರತಿಯೊಂದು ಪ್ರಕರಣಗಳನ್ನು ಗಂಭೀರವಾಗಿ

ಪರಿಗಣಿಸಿ, ಪ್ರತಿಯೊಂದು ಮಗುವು ತಮ್ಮ ಮಕ್ಕಳೆಂದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಇತ್ತೀಚೆಗೆ ಮಕ್ಕಳು ಅಪರಾಧ ಚಟುವಟಿಗಳಲ್ಲಿ ತೊಡಗುವುದಕ್ಕಿಂತ ಬಲಿಪಶುಗಳಾಗುವುದೇ ಹೆಚ್ಚಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳು ಗರ್ಭಿಣೆಯರಾಗುತ್ತಿದ್ದಾರೆ. ಇವುಗಳನ್ನು ತಡೆಗಟ್ಟಲು ಈ ರೀತಿಯ ಪ್ರಕರಣಗಳು ಎಲ್ಲಿ ಹೆಚ್ಚಾಗಿ ಕಂಡು ಬರುತ್ತವೆ ಎಂಬುದನ್ನು ಪತ್ತೆ ಹಚ್ಚಿ ಆ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಸಿಐಡಿ ವಿಭಾಗದ ರೋಹಿತ ಸಿ.ಜಿ. ಬಾಲನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಪೋಕ್ಸೋ, ಬಾಲ್ಯ ವಿವಾಹ ನಿಷೇಧ, ಉಚಿತ ಮಕ್ಕಳ ಸಹಾಯವಾಣಿ ಕರಪತ್ರ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ನೀರಜ್, ಡಿವೈಎಸ್ಪಿ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಮತ್ತಿತರರು ಇದ್ದರು.