ಮೊದಲ ಬಾರಿಗೆ ಸುವರ್ಣ ಸೌಧದಲ್ಲಿ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ವಿವಿಧ ಸಚಿವರು ಭಾಗವಹಿಸುತ್ತಾರೆ.

ಧಾರವಾಡ:

ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಕೊಡಮಾಡುವ 2022-23 ಹಾಗೂ 2023-24ನೇ ಸಾಲಿನ 102 ವಿವಿಧ ಪ್ರಶಸ್ತಿಗಳನ್ನು ಡಿ. 16ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, 2022-23ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರಿನ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ವಿಜಯಪುರದ ಲಲಿತಾ ಹೊಸಪ್ಯಾಟಿ ಹಾಗೂ ಮಂಗಳೂರಿನ ಭಾಸ್ಕರ್ ಅಡ್ವಳ, ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ರಾಯಚೂರಿನ ವಿ.ಎನ್‌. ಅಕ್ಕಿ, ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೈಸೂರಿನ ಎಸ್‌.ಎಫ್‌. ಹುಸೇನಿ, ಮಕ್ಕಳ ವಿಕಲಚೇತನ ಕ್ಷೇತ್ರದಲ್ಲಿ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ ಹಾಗೂ ಮಕ್ಕಳ ಮನೋವಿಕಾಸ ಕ್ಷೇತ್ರದಲ್ಲಿ ಶಿವಮೊಗ್ಗದ ಡಾ. ಕೆ.ಎಸ್‌. ಪವಿತ್ರಾ ಅವರಿಗೆ ನೀಡಲಾಗುತ್ತಿದೆ ಎಂದರು.

2023-24ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಪಂಡಿತ ರಾಮಕೃಷ್ಣ ಶಾಸ್ತ್ರಿ , ಮೈಸೂರಿನ ಬೆ.ಗೋ. ರಮೇಶ, ಕೊಪ್ಪಳದ ಅರುಣಾ ನರೇಂದ್ರ, ಮಕ್ಕಳ ರಂಗಭೂಮಿಯಲ್ಲಿ ಬೆಂಗಳೂರಿನ ಮಾಲತೇಶ ಬಡಿಗೇರ, ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹುಬ್ಬಳ್ಳಿಯ ಪ್ರತಾಪ ಬಹುರೂಪಿ, ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಬೀದರ್‌ನ ಶಾಹೀನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌ ಹಾಗೂ ಮಕ್ಕಳ ಮನೋವಿಕಾಸ ಕ್ಷೇತ್ರದಲ್ಲಿ ನಾಗಸಿಂಹ ರಾವ್‌ ಅವರಿಗೆ ಕೊಡಮಾಡಲಾಗುತ್ತಿದೆ. ಈ ಪ್ರಶಸ್ತಿಯು ತಲಾ ₹25 ಸಾವಿರ ಮೊತ್ತ ಹೊಂದಿರುತ್ತದೆ ಎಂದು ತಿಳಿಸಿದರು.

ಮಕ್ಕಳ ಚಂದಿರ:

2022-23ನೇ ಸಾಲಿಗೆ ಐವರಿಗೆ ಹಾಗೂ 2023-24ನೇ ಸಾಲಿಗೆ ನಾಲ್ವರಿಗೆ ಮಕ್ಕಳ ಚಂದಿರ ಪ್ರಶಸ್ತಿ ನೀಡಲಾಗುತ್ತಿದ್ದು, ತಲಾ ₹15 ಸಾವಿರ ಮೊತ್ತ ಹಾಗೂ ಪ್ರಶಸ್ತಿ ಫಲಕಗಳಿದೆ. ಅದೇ ರೀತಿ ಅಕಾಡೆಮಿಯಿಂದ 2022-23ನೇ ಸಾಲಿಗೆ 22 ಮಕ್ಕಳಿಗೆ ಹಾಗೂ 2023-24ನೇ ಸಾಲಿಗೆ 29 ಮಕ್ಕಳಿಗೆ ₹10 ಸಾವಿರ ಮೊತ್ತದ ಅಕಾಡೆಮಿ ಬಾಲಗೌರವ ಪ್ರಶಸ್ತಿ ನೀಡಲಾಗುವುದು. 2022-23ನೇ ಸಾಲಿಗೆ 26 ಮಕ್ಕಳಿಗೆ ಹಾಗೂ 2023-24ನೇ ಸಾಲಿಗೆ 28 ಮಕ್ಕಳಿಗೆ ತಲಾ ₹10 ಸಾವಿರ ಮೊತ್ತದ ವಿಶೇಷ ಗೌರವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಬಬಲೇಶ್ವರ ತಿಳಿಸಿದರು.

ಮೊದಲ ಬಾರಿಗೆ ಸುವರ್ಣ ಸೌಧದಲ್ಲಿ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ವಿವಿಧ ಸಚಿವರು ಭಾಗವಹಿಸುತ್ತಾರೆ ಎಂದ ಬಬಲೇಶ್ವರ, ಪ್ರಸಕ್ತ ವರ್ಷ ಅಕಾಡೆಮಿಗೆ ₹3 ಕೋಟಿ ಅನುದಾನ ಬಂದಿದ್ದು, ₹1.50 ಕೋಟಿ ಸಿಬ್ಬಂದಿ ಸಂಬಳ ಹಾಗೂ ಇನ್ನುಳಿದ ₹1.50 ಕೋಟಿ ಅಕಾಡೆಮಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ. ಅಕಾಡೆಮಿ ಕಟ್ಟಡದಲ್ಲಿಯೇ ₹20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸ್ಟುಡಿಯೋ ಸಿದ್ಧಗೊಳಿಸಿದ್ದು ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಈ ಸ್ಟುಡಿಯೋ ಬಳಸಿಕೊಳ್ಳಲು ಚಿಂತಿಸಲಾಗಿದೆ. ಮುಂದಿನ ವರ್ಷ ಅಕಾಡೆಮಿ ಹತ್ತಾರು ಕಾರ್ಯಕ್ರಮ ಆಯೋಜಿಸಿದ್ದು ₹50 ಕೋಟಿ ಅನುದಾನ ಕೇಳಿದ್ದು ನೀಡುವ ನಿರೀಕ್ಷೆ ಹೊಂದಲಾಗಿದೆ ಎಂದರು.