ಸಾರಾಂಶ
ಆಲಮಟ್ಟಿ: ಮಕ್ಕಳ ಕಲಿಕಾಭ್ಯಾಸಕ್ಕೆ ಪಾಲಕರು ಶಿಕ್ಷಕರೊಂದಿಗೆ ಕೈಜೋಡಿಸಿ ಮುತುವರ್ಜಿ ವಹಿಸಿ ಪ್ರೋತ್ಸಾಹ ನೀಡಿದರೆ ಆ ಬಾಲ ಕುಸುಮಗಳು ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಮುಖ್ಯಶಿಕ್ಷಕ ಬಿ.ಡಿ.ಚಲವಾದಿ ಹೇಳಿದರು. ಆಲಮಟ್ಟಿ ಆರ್.ಎಸ್.ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಎರಡನೇ ಅವಧಿಯ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಲಮಟ್ಟಿ:
ಮಕ್ಕಳ ಕಲಿಕಾಭ್ಯಾಸಕ್ಕೆ ಪಾಲಕರು ಶಿಕ್ಷಕರೊಂದಿಗೆ ಕೈಜೋಡಿಸಿ ಮುತುವರ್ಜಿ ವಹಿಸಿ ಪ್ರೋತ್ಸಾಹ ನೀಡಿದರೆ ಆ ಬಾಲ ಕುಸುಮಗಳು ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಮುಖ್ಯಶಿಕ್ಷಕ ಬಿ.ಡಿ.ಚಲವಾದಿ ಹೇಳಿದರು.ಆಲಮಟ್ಟಿ ಆರ್.ಎಸ್.ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಎರಡನೇ ಅವಧಿಯ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಈ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಪೂರಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ. ಮಕ್ಕಳ ಅಭ್ಯುದಯಕ್ಕಾಗಿ ಇಲ್ಲಿ ಗುರು ಬಳಗ ಅವಿರತ ಪರಿಶ್ರಮ ಹಾಕಿ ಕಲಿಕಾಭಿರುಚಿಗೆ ಶ್ರಮಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿ ಓದು,ಬರಹದ ಕಲಿಕೆಗೆ ಉತ್ತೇಜಿಸಲಾಗಿದೆ. ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಮಕ್ಕಳ ಕಲಿಕೆ ನಲಿಕೆಯೊಂದಿಗೆ ಸಾಗಿದೆ ಎಂದರು. ಮಾರ್ಗದರ್ಶಕರಾಗಿ ಭಾಗವಹಿಸಿದ್ದ ಆಲಮಟ್ಟಿ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಮಾತನಾಡಿ, ಪ್ರಾಥಮಿಕ ಶಾಲಾ ಹಂತದ ಶಿಕ್ಷಣದಿಂದಲೇ ಮಕ್ಕಳ ಶೈಕ್ಷಣಿಕ ಜೀವನ ರೂಪುಗೊಳ್ಳುವುದು. ಕಾರಣ ಈ ಹಂತದ ಶಿಕ್ಷಣ ಗುಣಾತ್ಮಕವಾಗಿ ಗಟ್ಟಿಗೊಳ್ಳಬೇಕು. ಪಾಲಕ, ಪೋಷಕರು ತಮ್ಮ ಕುಸುಮಗಳ ಭವಿಷ್ಯತ್ತಿನ ಬಗ್ಗೆ ಹಲವಾರು ಕನಸು ಕಂಡಿರುತ್ತಾರೆ.ಅದನ್ನು ನನಸು ಮಾಡುವ ಮಹತ್ತರ ಹೊಣೆ ನಮ್ಮೆಲ್ಲರ ಮೇಲಿದೆ. ಉತ್ತಮ ಶಿಕ್ಷಣ ದೊರೆತರೆ ಮಕ್ಕಳ ಸುಂದರ ಭವಿಷ್ಯ ಸಾಕಾರಗೊಳ್ಳುತ್ತದೆ. ಶ್ರಮದ ಓದು, ಬರಹ ಖಂಡಿತ ಯಶಸ್ಸು ಫಲ ನೀಡುತ್ತದೆ. ಮಕ್ಕಳಿಗೆ ಇಂದು ಮಾನವೀಯ ಮೌಲ್ಯಯುತ ಗುಣ ಬೆಳೆಸುವಲ್ಲಿ ಎಲ್ಲರ ಸಹಭಾಗಿತ್ವ ಬೇಕು ಎಂದರು.ಶಿಕ್ಷಕ ರಾಘವೇಂದ್ರ ವಂದಗನೂರ ಮಾತನಾಡಿದರು. ಹಿರಿಯ ಶಿಕ್ಷಕ ಎಲ್.ಸಿ.ಚಲವಾದಿ, ಜೆ.ಎನ್.ಪಾಟೀಲ, ಎಂ.ಟಿ. ಲಮಾಣಿ, ಎನ್.ಐ. ಅರಳಿಗಿಡ, ಗುರುಮಾತೆ ಎಸ್.ಜಿ.ಗಂಟಿ, ಎ.ಎಸ್. ಚಿಮ್ಮಲಗಿ ಸೇರಿದಂತೆ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಪಾಲಕ ಪೋಷಕರು ಇತರರಿದ್ದರು. ಇದೇ ವೇಳೆ ಏಳು ತಿಂಗಳ ಕಾಲ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅಶ್ವಿನಿ ಪಾಟೀಲಗೆ ಗುರುಬಳಗ ಶಾಲು ಹೊದಿಸಿ ಸನ್ಮಾನಿಸಿ ಗೌರವದಿಂದ ಬೀಳ್ಕೋಟ್ಟರು.
--