ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಒಂದೂವರೆ ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ, ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಒಂದೂವರೆ ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿ ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ನೀರು ತುಂಬಿಕೊಂಡಿತ್ತು. ಆಟವಾಡುತ್ತಿದ್ದ ಮಗು ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದೆ. ಇದೇ ಕಟ್ಟಡದಲ್ಲಿ ಕಾರ್ಮಿಕರಾದ ಬೆಂಗಳೂರಿನ ಶ್ರೀರಾಂಪುರ ಮೂಲದ ರಾಜಪಾಲ್‌ ಹಾಗೂ ಶ್ವೇತಾ ದಂಪತಿಯ ಮಗಳಾದ ಪಲ್ಲವಿ ಮೃತಪಟ್ಟ ದುರ್ದೈವಿ. ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಗುವಿನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.