ಬಸ್ ನಿಲ್ದಾಣದಲ್ಲಿ ಮಕ್ಕಳಸ್ನೇಹಿ ವಾತಾವರಣ ಅವಶ್ಯ

| Published : Mar 15 2025, 01:02 AM IST

ಬಸ್ ನಿಲ್ದಾಣದಲ್ಲಿ ಮಕ್ಕಳಸ್ನೇಹಿ ವಾತಾವರಣ ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅಭಿವೃದ್ಧಿಯಾಗಬೇಕಾದರೆ, ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಸಂವಿಧಾನ ಮಕ್ಕಳಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣ ಹಕ್ಕು ಸಾಕಾರಗೊಳ್ಳುವಲ್ಲಿ ಸಾರಿಗೆ ಇಲಾಖೆಯ ಪಾತ್ರ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

ಕೊಪ್ಪಳ:

ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಮಕ್ಕಳಸ್ನೇಹಿ ಮತ್ತು ಮಕ್ಕಳ ಪರವಾದ ವಾತಾವರಣ ನಿರ್ಮಾಣಕ್ಕಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.

ನಗರದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಪಂ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೊಪ್ಪಳ ವಿಭಾಗ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ “ಮಕ್ಕಳಸ್ನೇಹಿ ಸಾರಿಗೆ ಕಾರ್ಯಕ್ರಮ” ಅನುಷ್ಠಾನ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯಾಗಬೇಕಾದರೆ, ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಸಂವಿಧಾನ ಮಕ್ಕಳಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣ ಹಕ್ಕು ಸಾಕಾರಗೊಳ್ಳುವಲ್ಲಿ ಸಾರಿಗೆ ಇಲಾಖೆಯ ಪಾತ್ರ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಸಾರಿಗೆ ಇಲಾಖೆಯ ಕೆಲವು ಸಿಬ್ಬಂದಿ ಮಕ್ಕಳೊಂದಿಗೆ ಅನುಚಿತ ವರ್ತನೆಯನ್ನು ತೋರುತ್ತಿರುವುದು ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಕೆಲವು ಜನರು ಸಿಬ್ಬಂದಿಯನ್ನು ಬೆದರಿಸಲು ಮಕ್ಕಳ ಪರವಾದ ಕಾಯ್ದೆಗಳ ದುರ್ಬಳಕೆ ಮಾಡುತ್ತಿರುವುದು ಸಹ ಕಂಡುಬರುತ್ತಿದೆ. ಆದ್ದರಿಂದ ಆಯೋಗವು “ಮಕ್ಕಳಸ್ನೇಹಿ ಸಾರಿಗೆ ಕಾರ್ಯಕ್ರಮ” ಜಾರಿಗೆ ತಂದಿದೆ ಎಂದರು.

ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಎಂ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ್, ಬಸ್ ಡಿಪೋಗಳ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.