ಕನ್ನಡಪ್ರಭ ವಾರ್ತೆ ಕಾರವಾರ

ಬಾಲ ಕಾರ್ಮಿಕ ಪದ್ದತಿಯಿಂದ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳಲಿದ್ದು, ಮಕ್ಕಳಿಗೆ ಆಟ ಪಾಠದ ಜೊತೆ ಉತ್ತಮ ಆರೋಗ್ಯ ಹಾಗೂ ಸುರಕ್ಷಿತ ಬಾಲ್ಯ ಒದಗಿಸುವ ಉದ್ದೇಶದಿಂದ, ಬಾಲ ಕಾರ್ಮಿಕ ಪದ್ದತಿ ನಿಮೂಲನೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.

ಶುಕ್ರವಾರ ನಗರದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಅದರ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೆಚ್ಚಿನ ಮಕ್ಕಳು ಬಡತನ ಮತ್ತು ವಲಸೆಯ ಕಾರಣದಿಂದಾಗಿ ಬಾಲ ಕಾರ್ಮಿಕ ಪದ್ಧತಿಗೆ ದೂಡಲ್ಪಡುತ್ತಿದ್ದಾರೆ. ಕಾರ್ಖಾನೆ, ಹೋಟೆಲ್ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಪಾಲಕರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕು ಆ ನಿಟ್ಟಿನಲ್ಲಿ ಅವರಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ತಡೆ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ಮಕ್ಕಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ಹರಡುತ್ತಿದ್ದು. ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಗೆ ಒಳಗಾಗದೇ ಉತ್ತಮ ಭವಿಷ್ಯ ರೂಪಿಸಕೊಳ್ಳಬೇಕು ಎಂದರು.


ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮಾತನಾಡಿ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬೇಕಾಗಿದೆ ಎಂದರು.

ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ ಕುರಿತು ಕಾರ್ಮಿಕ ನಿರೀಕ್ಷಕ ಡಿ.ಎಂ. ವೆಂಕಟೇಶಬಾಬು ವಿಶೇಷ ಉಪನ್ಯಾಸ ನೀಡಿದರು.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾ ನಿಧಿ ಭೋಧಿಸಲಾಯಿತು.

ಚುನಾವಣಾ ಶಾಖೆ ತಹಶೀಲ್ದಾರ ಪ್ರಮೋದ ನಾಯ್ಕ, ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್., ಸೆಂಟ್ ಜೋಸೆಫ್ಸ್ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಂಶುಪಾಲ ರೆ.ಡಾ.ಸ್ಟ್ಯಾನಿ ಪಿಂಟೊ ಯಲ್ಲಾಪುರ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಮತ್ತಿತರರು ಇದ್ದರು.