ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ

| Published : Dec 01 2024, 01:30 AM IST

ಸಾರಾಂಶ

ದೇಶವನ್ನು ಬಾಲ್ಯ ವಿವಾಹ ಮುಕ್ತ ಭಾರತವನ್ನಾಗಿಸುವ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದೆ.

ಸಂಡೂರು: ತಾಲೂಕಿನ ಸುಶೀಲಾನಗರ, ಕೃಷ್ಣಾನಗರ, ಯಶವಂತನಗರ, ದೌಲತ್‌ಪುರ, ಸಿದ್ದಾಪುರ ಗ್ರಾಮಗಳಲ್ಲಿ ಬುಧವಾರ ರೀಚ್ ಸಂಸ್ಥೆಯಿಂದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

೨೦೩೦ಕ್ಕೆ ಬಾಲ್ಯವಿವಾಹ ಮುಕ್ತ ಭಾರತವನ್ನಾಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಬುಧವಾರ ದೇಶದಾದ್ಯಂತ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕಾರ್ಯಕ್ಕೆ ಚಾಲನೆ ನೀಡಿದೆ.

ಸುಶೀಲಾನಗರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ರೀಚ್ ಸಂಸ್ಥೆಯ ತಾಲ್ಲೂಕು ಸಂಯೋಜಕ ಡಾ. ಎರಿಸ್ವಾಮಿ ಹೆಚ್ ಮತನಾಡಿ, ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ೨೦೩೦ರ ವೇಳೆಗೆ ದೇಶವನ್ನು ಬಾಲ್ಯ ವಿವಾಹ ಮುಕ್ತ ಭಾರತವನ್ನಾಗಿಸುವ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದೆ. ರೀಚ್ ಸಂಸ್ಥೆಯು ಈ ಅಭಿಯಾನದಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡು, ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ನಿರ್ಮೂಲನೆಗಾಗಿ ಜಾಗೃತಿ ಮೂಡಿಸುತ್ತಿದೆ. ಬಾಲ್ಯವನ್ನು ಕಸಿದುಕೊಳ್ಳುವ ಈ ಸಾಮಾಜಿನ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ಸಮುದಾಯಗಳೊಂದಿಗೆ ಕೆಲಸ ಮಾಡುವ ಕಾರ್ಯಕರ್ತರು ಶ್ರಮಿಸುವುದು ಅಗತ್ಯವಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ರೀಚ್ ಸಂಸ್ಥೆಯು ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಮೂಲಕ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಮಂಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯ ವಿವಾಹ ನಿರ್ಮೂಲನೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾನೂನು, ಬಾಲ್ಯ ವಿವಾಹದಿಂದಾಗುವ ತೊಂದರೆಗಳು, ಅವುಗಳನ್ನು ತಡೆಯುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು. ತಾಲ್ಲೂಕಿನ ಕೃಷ್ಣಾನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿಯೂ ಅಭಿಯಾನ ಕುರಿತು ಜಾಗೃತಿಯನ್ನು ಮೂಡಿಸಲಾಯಿತು ಮತ್ತು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ರೀಚ್ ಸಂಸ್ಥೆಯ ಸದಸ್ಯರಾದ ಪವಿತ್ರಾ, ಪುಷ್ಪವತಿ, ಸುಧಾ, ಮೌನೇಶ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೀಚ್ ಸಂಸ್ಥೆಯಿಂದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.