ಸರ್ಕಾರ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರನ್ನು ಜಾರಿಗೆ ತಂದಿರುತ್ತದೆ. ರಾಜ್ಯದಲ್ಲಿ ಬಾಲ್ಯವಿವಾಹ ಪ್ರಮಾಣಗಳು ಅಧಿಕವಾಗಿರುವುದನ್ನು ಗಮನಿಸಿ ಕರ್ನಾಟಕ ಸರ್ಕಾರ ಕಾಯ್ದೆ ಅನುಷ್ಠಾನ ಗೊಳಿಸಲು-2016ರಲ್ಲಿ ತಿದ್ದುಪಡಿ

ಕೊಪ್ಪಳ: ಮಕ್ಕಳ ಹಕ್ಕು ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಗರದ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುವುದರಿಂದ ಮಕ್ಕಳು ದೈಹಿಕ, ಮಾನಸಿಕ, ಶಾರೀರಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಅಲ್ಲದೇ, ಹುಟ್ಟುವ ಮಗುವು ವಿಕಲಚೇತನ ಅಪೌಷ್ಠಿಕ ಅಥವಾ ಶಿಶು ಮರಣ ಸಾಧ್ಯತೆ ಅಧಿಕವಾಗಿರುವುದು, ತಾಯಿ ಅಥವಾ ಮಗು ಇಬ್ಬರು ಮೃತಪಡಬಹುದಾಗಿರುತ್ತದೆ ಎಂದರು.

ಸರ್ಕಾರ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರನ್ನು ಜಾರಿಗೆ ತಂದಿರುತ್ತದೆ. ರಾಜ್ಯದಲ್ಲಿ ಬಾಲ್ಯವಿವಾಹ ಪ್ರಮಾಣಗಳು ಅಧಿಕವಾಗಿರುವುದನ್ನು ಗಮನಿಸಿ ಕರ್ನಾಟಕ ಸರ್ಕಾರ ಕಾಯ್ದೆ ಅನುಷ್ಠಾನಗೊಳಿಸಲು-2016ರಲ್ಲಿ ತಿದ್ದುಪಡಿ ತಂದಿದ್ದು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದವರಿಗೆ ಭಾಗವಹಿಸಿದವರಿಗೆ ಮತ್ತು ಪ್ರೋತ್ಸಾಹಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಬಹುದಾಗಿದೆ ಎಂದರು.

ಎಲ್ಲ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿರುತ್ತವೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಸಹ ಲೈಂಗಿಕ ಅಪರಾಧಗಳೆಂದು ಪರಿಗಣಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಈ ರೀತಿಯ ಹಲವಾರು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಲಾಗಿದೆ. ಈ ಎಲ್ಲ ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ರಕ್ಷಿಸಲು ಹಾಗೂ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಈ ಕಾಯ್ದೆಯ ಕುರಿತು ಮತ್ತಷ್ಟು ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಗರ್ಭಿಣಿಯರಾಗಿರುವ ಪ್ರಕರಣಗಳು ವರದಿಯಾಗಿವೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ 2019 ರನ್ವಯ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ದೌರ್ಜನ್ಯಗಳಿಗೆ ಕನಿಷ್ಠ 20 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ರೀತಿಯಲ್ಲಿ ಶಿಕ್ಷೆ ವಿಧಿಸಿದ ಪ್ರಕರಣಗಳು ಸಹ ಜಿಲ್ಲೆಯಲ್ಲಿ ವರದಿಯಾಗಿವೆ. ಯುವಕರು ಈ ಕಾಯ್ದೆಯ ಕುರಿತು ಹೆಚ್ಚಿನ ಅರಿವು ಪಡೆದು ಸುರಕ್ಷತಾ ಜೀವನ ನಡೆಸುವಂತೆ ಹಾಗೂ ಬಾಲಕಿಯರು ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೇ ಸುರಕ್ಷಿತವಾಗಿರುವಂತೆ ಮತ್ತು ಯಾವುದೇ ಕಾರಣಕ್ಕೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಆಗಬಾರದು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕಿ ಮಂಜುಳಾ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿಯಾಗಿದ್ದು, ಉತ್ತಮ ಶಿಕ್ಷಣವಂತರಾಗಬೇಕು. ಮಕ್ಕಳು ಮುಂದೆ ಒಳ್ಳೆಯ ಪ್ರಜೆಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತರಾಗಬೇಕೆಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಮರಮ್ಮ ಹಿರೇಮಠ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಸಿಂಗನಾಳ ಮಕ್ಕಳ ಸಹಾಯವಾಣಿ-1098ರ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ ವಂದನಾರ್ಪಣೆ ಮಾಡಿದರು. ಬಾಲಕರ ವಸತಿ ಶಾಲೆ ಒಟ್ಟು 70 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.