ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ: ರತ್ನಮ್ಮ

| Published : Jan 23 2025, 12:47 AM IST

ಸಾರಾಂಶ

ಹನೂರು ತಾಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳ ಹಕ್ಕುಗಳ ಪ್ರತಿನಿಧಿ ರತ್ನಮ್ಮ ಭಾಗವಹಿಸಿ ಮಾತನಾಡಿದರು.

ಹನೂರು: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಸಾಬೀತು ಆದರೆ ಪೋಷಕರಿಗೆ ಜೈಲು ಶಿಕ್ಷೆ ಆಗುತ್ತದೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮಾಹಿತಿ ಒದಗಿಸುವುದು ಅಗತ್ಯವಾಗಿದೆ ಎಂದು ಪಿಎಂಎಸ್‌ಆರ್ ಸಂಸ್ಥೆಯ ಮಕ್ಕಳ ಹಕ್ಕುಗಳ ಪ್ರತಿನಿಧಿ ರತ್ನಮ್ಮ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಹುತ್ತೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಭ್ರೂಣ ವ್ಯವಸ್ಥೆಯಿಂದ 18 ವರ್ಷಗಳವರೆಗೆ ವಯೋಮಾನದವರನ್ನು ಮಕ್ಕಳೇ ಎಂದೇ ಪರಿಗಣಿಸಲಾಗಿದೆ. ಕಡ್ಡಾಯ ಶಿಕ್ಷಣ ಸೇರಿದಂತೆ ಮಕ್ಕಳಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕುಗಳು ಮತ್ತು ರಕ್ಷಣೆಗಳ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಪಿಡಿಒ ರಾಜು ಮಾತನಾಡಿ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ. ಬಾಲ್ಯವಿವಾಹ ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ನೀತಿ ನಿಯಮಗಳನ್ನು ತಂದಿದ್ದರೂ ಕೂಡ ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ಮಾಡಿರುವ ಉದಾಹರಣೆಗಳಿವೆ. ಹಾಗಾಗಿ ಇಂತವುಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದರು.

ಹುತ್ತೂರು ಶಾಲೆಗೆ ಸುತ್ತು ಗೋಡೆ, ಶೌಚಾಲಯ, ಆಟದ ಮೈದಾನ, ವಿ.ಎಸ್. ದೊಡ್ಡಿ ಶಾಲೆಗೆ ಇ-ಸ್ವತ್ತು ಸೌಲಭ್ಯ ಸೇರಿದಂತೆ ಮಕ್ಕಳು ಮನವಿ ಮಾಡಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಹುತ್ತೂರ ಶಾಲೆಯ ವಿದ್ಯಾರ್ಥಿಗಳು ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣವನ್ನು ಶೀಘ್ರದಲ್ಲೇ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಆಟದ ಮೈದಾನ ಭೋಜನ ಕೊಠಡಿ ಇನ್ನೆತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಮನವಿ ಸಲ್ಲಿಸಿದರು.

ಶಿಕ್ಷಣ ಸಂಯೋಜಕ ಚಿನ್ನಪ್ಪಯ್ಯ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರೇಖಾ ಬಾಲಕೃಷ್ಣ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಹುತ್ತೂರು ಶಾಲೆಯ ಮುಖ್ಯ ಶಿಕ್ಷಕ ಮಾದೇಶ್, ಸಹ ಶಿಕ್ಷಕರು, ಗ್ರಾಪಂ ಕಾರ್ಯದರ್ಶಿ ನಾಗೇಶ್, ಮುಖಂಡ ಬಾಲಕೃಷ್ಣ ನಾಯಕ, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಪ್ರತಿನಿಧಿಗಳು ಉಪಸ್ಥಿತರಿದ್ದರು.