ಬಾಲ ಗರ್ಭಿಣಿಯರ ಕುರಿತ ಕಾರ್ಯಕ್ರಮದಲ್ಲಿ ಟಿಎಚ್‍ಒ ಡಾ.ಬಿ.ವಿ.ಗಿರೀಶ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಲ್ಯ ವಿವಾಹಕ್ಕೆ ಆಸ್ಪದ ನೀಡಬೇಡಿ. ಬಾಲ ಗರ್ಭಿಣಿಯರಾಗದಂತೆ ನಿಗಾವಹಿಸಿರಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲೂಕಿನ ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಯಳಗೋಡು ಗ್ರಾಮದ ಅಂಗನವಾಡಿ ಬಿ.ಕೇಂದ್ರದಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಬಾಲ ಗರ್ಭಿಣಿಯರ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

18 ವರ್ಷದ ಒಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಅದು ಬಾಲ್ಯ ವಿವಾಹ, ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾದರೂ ಇನ್ನೂ ಕೂಡ ಬಾಲ್ಯ ವಿವಾಹವಾಗುತ್ತಿರುವುದು ವಿಷಾಧದ ಸಂಗತಿ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಮೊದಲು ನಂತರ ಮದುವೆ, ಶಿಕ್ಷಣದ ಕೊರತೆ ಇರುವ ಕುಟುಂಬಗಳಲ್ಲಿ ಬಡತನ, ಅನಕ್ಷರತೆ ಎದ್ದು ಕಾಣುತ್ತದೆ, ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಶಿಕ್ಷಣಕ್ಕೆ ಮುದ್ರೆ ಹಾಕಿದಂತೆ. ಶಾಲೆ ಬಿಡಬೇಕಾದ ಸಂಗತಿ ಎದುರಾಗಿ ಭವಿಷ್ಯ ಕುಂಠಿತವಾಗುತ್ತದೆ, ಆ ತಾಯಿ ಗರ್ಭಿಣಿಯಾದರೆ ಚಿಕ್ಕ ವಯಸ್ಸಿನಲ್ಲಿ ಜವಾಬ್ದಾರಿ ಹೆಗಲಿಗೇರುವುದರಿಂದ ತೀವ್ರ ಖಿನ್ನತೆ, ಆತಂಕ, ಮಾನಸಿಕ ಒತ್ತಡದಿಂದಾಗಿ ತಾಯಿಯ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ಗರ್ಭದಲ್ಲಿ ಬೆಳೆಯುವ ಮಗುವಿನ ಬೆಳವಣಿಗೆ ಕುಂಠಿತ ವಾಗುವುದಲ್ಲದೆ ಹೆರಿಗೆ ಸಮಯದಲ್ಲಿ ದಿನತುಂಬದ ಹೆರಿಗೆ, ಕಡಿಮೆ ತೂಕದ ಮಕ್ಕಳು ಹುಟ್ಟುವ ಸಂಭವ ಹಾಗೂ ಶಿಶುಮರಣ ತಾಯಿ ಮರಣ ಸಂಭವಿಸಬಹುದು. ಪ್ರಯುಕ್ತ 18 ವರ್ಷದ ಒಳಗಡೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಡಿ ನಂತರ ಮದುವೆ ಮಾಡಿದರೂ ಸಹ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ದೊರೆಯುವ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಸದುಪಯೋಗ ಪಡೆದು ಮಕ್ಕಳ ಪಡೆಯುವುದನ್ನು ಮುಂದೂಡಬೇಕೆಂದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಟಿ ಕಾಳಮ್ಮ ಮಾತನಾಡಿ, ಗರ್ಭಿಣಿ ತಾಯಂದಿರು ಸಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ಸೇವಿಸಿ ಮಕ್ಕಳಿಗೆ ಸೂಕ್ತ ಲಸಿಕೆಗಳನ್ನು ಹಾಕಿಸುತ್ತ ಉತ್ತಮ ಆರೋಗ್ಯ ಹೊಂದಬೇಕೆಂದರು.

ಈ ವೇಳೆ ಆಶಾ ಕಾರ್ಯಕರ್ತೆಯರಾದ ಸುನಿತಾ, ಉಮಾದೇವಿ, ಅಂಗನವಾಡಿ ಸಹಾಯಕಿ ರೇಖಾ ಸೇರಿದಂತೆ ಸಾರ್ವಜನಿಕರು ಗರ್ಭಿಣಿಯರು ಉಪಸ್ಥಿತರಿದ್ದರು.