ಮಕ್ಕಳ ಹಕ್ಕು, ರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಮಾತ್ರವೇ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದಲೇ ಸಮರ್ಪಕ ತರಬೇತಿ, ಮಾರ್ಗದರ್ಶನ ನೀಡುವ ವ್ಯವಸ್ಥೆಯಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದ್ದಾರೆ.

- ಪ್ರೊ. ಬಿ.ಡಿ.ಕುಂಬಾರ ಅಭಿಮತ । ಮಕ್ಕಳ ಸಮಸ್ಯೆಗಳ ವರದಿಗಾರಿಕೆಯಲ್ಲಿ ಪತ್ರಕರ್ತರ ಹೊಣೆಗಾರಿಕೆ ಕಾರ್ಯಾಗಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳ ಹಕ್ಕು, ರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಮಾತ್ರವೇ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದಲೇ ಸಮರ್ಪಕ ತರಬೇತಿ, ಮಾರ್ಗದರ್ಶನ ನೀಡುವ ವ್ಯವಸ್ಥೆಯಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವತಿಯಿಂದ ಯುನಿಸೆಫ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸಮಸ್ಯೆಗಳ ವರದಿಗಾರಿಕೆಯಲ್ಲಿ ಪತ್ರಕರ್ತರ ಹೊಣೆಗಾರಿಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರ ಜೊತೆಗೆ ವಿದ್ಯಾರ್ಥಿಗಳು, ಶಿಕ್ಷಕರಿಗೂ ಮಕ್ಕಳ ಸಮಸ್ಯೆಗಳು, ಕಾನೂನುಗಳ ಜಾಗೃತಿ ತರಬೇತಿ ನೀಡುವ ವ್ಯವಸ್ಥೆಯಾಗಬೇಕು. ಯುನಿಸೆಫ್ ಈ ನಿಟ್ಟಿನಲ್ಲಿ ಆದ್ಯತೆ ನೀಡಿ, ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಜಾಗೃತರನ್ನಾಗಿ ಮಾಡಿದರೆ ಭವಿಷ್ಯದಲ್ಲಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಉತ್ತಮ ನಾಗರಿಕ ಸಮಾಜವನ್ನು ನಿರ್ಮಿಸಲು ನೆರವಾಗುತ್ತದೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ ಕಾಳಜಿಯುಕ್ತ ವರದಿಗಳು ದಿನವೂ ಪ್ರಕಟವಾಗುತ್ತಿವೆ. ಆದರೆ, ಯಾವ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗುತ್ತಿಲ್ಲ. ತಂಬಾಕು, ಮದ್ಯಪಾನದ ಅಪಾಯಗಳ ಬಗ್ಗೆ ಜನರಿಗೆ ಜಾಹೀರಾತುಗಳ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಆದರೆ ಹಳ್ಳಿ-ಪಟ್ಟಣ ಭೇದವಿಲ್ಲದೆ ಅಪ್ಪ-ಮಕ್ಕಳು ಕೂಡಿಯೇ ಮದ್ಯ ಸೇವಿಸುವ, ಬೀಡಿ-ಸಿಗರೇಟು ಸೇದುವ ದುರಾಭ್ಯಾಸವನ್ನು ಮಾಡುವರು. ಮಕ್ಕಳ ಹಕ್ಕುಗಳಿಗೆ ಹಲವಾರು ಕಾನೂನುಗಳಿವೆ. ರಕ್ಷಣೆಗಾಗಿ ಸಮಿತಿಗಳು, ಸಂಘಟನೆಗಳು ಕೆಲಸ ಮಾಡುತ್ತವೆ. ಆದರೆ ಇದುವರೆಗೂ ಅವುಗಳು ಎಷ್ಟರಮಟ್ಟಿಗೆ ಪಾಲನೆಯಾಗಿದೆ ಎಂಬುದನ್ನು ಪರಿಶೀಲಿಸುತ್ತಿಲ್ಲ. ಸರ್ಕಾರ ಮತ್ತು ಆಡಳಿತ ಯಂತ್ರವನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ. ಎಂ.ಎಸ್. ಸಪ್ನಾ ಮಾತನಾಡಿ, ಪತ್ರಕರ್ತರಿಗೆ ಮಕ್ಕಳ ಹಕ್ಕು, ಕಾನೂನು, ಆರೋಗ್ಯ ಸಮಸ್ಯೆಗಳು ಹಾಗೂ ಶೈಕ್ಷಣಿಕ ವಿಚಾರಗಳನ್ನು ಕುರಿತು ಚರ್ಚೆಯ ಮೂಲಕ ಮನನ ಮಾಡಿಕೊಡುವ ಉದ್ದೇಶದಿಂದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆ ಮೂಲಕ ಸುಸ್ಥಿರ, ಆರೋಗ್ಯವಂತ ಸಮಾಜ ನಿರ್ಮಿಸುವ ಉದ್ದೇಶವೂ ಇದಾಗಿದೆ ಎಂದು ವಿವರಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಮಾತನಾಡಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಅನಂತರ ನಡೆದ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕು ಮೇಲ್ವಿಚಾರಣೆ ರಾಜ್ಯ ಸಂಚಾಲಕ ಡಾ.ವಾಸುದೇವ ಶರ್ಮಾ ಅವರು ಮಕ್ಕಳ ಹಕ್ಕುಗಳ ಕಾರ್ಯ ಚೌಕಟ್ಟು ಮತ್ತು ಕಾನೂನುಗಳು ಕುರಿತು ಮಾತನಾಡಿದರು. ಯುನಿಸೆಫ್ ವೈದ್ಯಾಧಿಕಾರಿ ಡಾ. ಶ್ರೀಧರ ರ‍್ಯಾವಂಕಿ ಅವರು ಇತ್ತೀಚಿನ ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕುರಿತು ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.

- - -

(ಬಾಕ್ಸ್‌) * ಜಗತ್ತಿನಾದ್ಯಂತ ಸಮಸ್ಯೆ ಯುನಿಸೆಫ್ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಅಧಿಕಾರಿ ಪ್ರೊಸುನ್ ಸೇನ್ ಮಾತನಾಡಿ, ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಯೂನಿಸೆಫ್, ವರ್ಷವಿಡೀ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಪರಿಹಾರ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಸಮಸ್ಯೆಗೆ ಸ್ಪಂದಿಸಿ ಪರ್ಯಾಯಗಳನ್ನು ರೂಪಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.

- - -

-17ಕೆಡಿವಿಜಿ32:

ಪತ್ರಕರ್ತರ ಪುನರ್ಮನನ ಕಾರ್ಯಾಗಾರ ಉದ್ಘಾಟಿಸಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಮಾತನಾಡಿದರು.