ಹಾವೇರಿ: ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಮಕ್ಕಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕು. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ತಿಳಿದುಕೊಂಡು ಸಂಪೂರ್ಣ ಅನುಷ್ಠಾನ ಮಾಡಿದಾಗ ಮಾತ್ರ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವವರ ರಕ್ಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಮಕ್ಕಳ ವಸತಿ ನಿಲಯಗಳ ನಿಲಯ ಮೇಲ್ವಿಚಾರಕರಿಗೆ ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಕೊಪ್ಪಳ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಗರ್ಭಿಣಿಯರಾದ ಪ್ರಕರಣಗಳನ್ನು ನೋಡಲಾಗಿದೆ. ಹಾಗಾಗಿ ಮಕ್ಕಳ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ನಾನು ಜಿಲ್ಲೆಗೆ ಆಗಮಿಸಿದ ಸಮಯದಲ್ಲಿ ಹಲವಾರು ವಸತಿ ಶಾಲೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಆಯೋಗಕ್ಕೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಡಿಪ್ಲೋಮಾ, ಐಟಿಐ, ಪ್ಯಾರಾಮೆಡಿಕಲ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸವನ್ನು ಆಯೋಗ ಮಾಡಿದೆ. ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಿದ ಕುರಿತು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು. ಇಂದು ಸಾಕಷ್ಟು ಪೋಕ್ಸೋ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳಲ್ಲಿ 25 ರಿಂದ 75 ವರ್ಷದವರಿದ್ದಾರೆ. ಶೇ.70ರಷ್ಟು ಪೋಕ್ಸೋ ಪ್ರಕರಣಗಳಿರುವುದು ವಿಷಾದಕರ ಸಂಗತಿಯಾಗಿದೆ. ಮಕ್ಕಳ ದುರುಪಯೋಗವಾಗುತ್ತಿದ್ದು, ಮಕ್ಕಳ ರಕ್ಷಣೆಗೆ ಎಲ್ಲರೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಎಸ್. ಹೊಸಮಠ ಮಾತನಾಡಿ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ತಡೆಗೆ ಸೇರಿದಂತೆ ಮಕ್ಕಳ ರಕ್ಷಣೆ ಕಾಯ್ದೆಗಳ ಕುರಿತು ಗ್ರಾಪಂ ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರಿಗೆ ಕಾರ್ಯಾಗಾರ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 2025 ರಿಂದ ಈವರೆಗೆ 52 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಅದೇ ರೀತಿ ಪ್ರೋಕ್ಸೋ ಮತ್ತು ಬಾಲ್ಯವಿವಾಹ 35 ಪ್ರಕರಣ ಹಾಗೂ 40 ಬಾಲಗರ್ಭಿಣಿಯರ ಪ್ರಕರಣಗಳು ಕಂಡು ಬಂದಿರುವುದು ವಿಷಾದಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮಕ್ಕಳ ರಕ್ಷಣೆ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ಅಕ್ಕಪಡೆ ಆರಂಭಿಸಲಾಗಿದೆ. ಈ ಪಡೆಯು ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆ ಸ್ಥಳಗಳಲ್ಲಿ ನಿಗಾವಹಿಸುತ್ತದೆ. ಬರುವ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಅಕ್ಕಪಡೆ ಆರಂಭಿಸಲಾಗುವುದು. ಮಕ್ಕಳ ಸಮಸ್ಯೆಗೆ 1098 ಹಾಗೂ ಮಹಿಳೆಯರ ಸಮಸ್ಯೆಗೆ 112 ಅಥವಾ 181 ಸಂಖ್ಯೆಗೆ ಸಂಪರ್ಕಿಬಹುದು ಎಂದು ಹೇಳಿದರು.ಕೊಪ್ಪಳ ಯುನಿಸೆಫ್ ಕಾರ್ಯಕ್ರಮ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ಅವರು ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಕುರಿತು ಕಾಯ್ದೆಗಳ ಕುರಿತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ಆರ್. ಸುಬ್ರಾನಾಯಕ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಡಾ. ಅಬ್ದುಲ್ ರಶೀದ್ ಮಿರ್ಜಾನವರ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಕುಮಾರ ಮಣ್ಣವಡ್ಡರ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿನಯ ಗುಡದೂರ ನಿರೂಪಿಸಿದರು. ಕೃಷ್ಣ ವಂದಿಸಿದರು.ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲಗರ್ಭಿಣಿಯರ ಪ್ರಕರಣಗಳು ಅಧಿಕವಾಗಿದ್ದು, ಮಕ್ಕಳ ರಕ್ಷಣೆ ಕಾಯ್ದೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಹಾಗೂ ಪೋಕ್ಸೋ ಪ್ರಕರಣ ಹಾಗೂ ಬಾಲಗರ್ಭಿಣಿಯರ ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಶೈಲಜಾ ಎಚ್. ವಿ. ಹೇಳಿದರು.