ಸಾರಾಂಶ
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮತ್ತು ಚೈಲ್ಡ್ ರೈಟ್ಸ್ ಬೆಂಗಳೂರು ಸಂಸ್ಥೆ ಸಹಯೋಗದಲ್ಲಿ ಚೈಲ್ಡ್ ರೈಟ್ಸ್ ಸಂಸ್ಥೆ ನಿರ್ದೇಶಕ ಡಾ। ಎನ್.ವಿ.ವಾಸುದೇವ ಶರ್ಮಾ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಮಾಜದ ಆಸ್ತಿ, ದೇಶದ ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳ ಹಕ್ಕುಗಳ ರಕ್ಷಣೆ ಸರ್ಕಾರದಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು ಚೈಲ್ಡ್ ರೈಟ್ಸ್ ಸಂಸ್ಥೆ ನಿರ್ದೇಶಕ ಡಾ। ಎನ್.ವಿ.ವಾಸುದೇವ ಶರ್ಮಾ ಹೇಳಿದರು.ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮತ್ತು ಚೈಲ್ಡ್ ರೈಟ್ಸ್ ಬೆಂಗಳೂರು ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲ್ಪನೆಯಿಂದ ಸಾಧ್ಯತೆಯೆಡೆಗೆ’ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ನೋಡಿದರೆ ಮಕ್ಕಳಿಗೆ ಸಮಾಜದಲ್ಲಿ ಭದ್ರತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಇಂತಹ ಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹಾಗಾಗಿ ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಸುರಕ್ಷತೆಯ ವಿಚಾರ ಕೇವಲ ಸರ್ಕಾರದ್ದಲ್ಲ. ಇಡೀ ಸಮಾಜಕ್ಕಾಗಿದೆ ಎಂದರು.
ಬೆಂ.ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಶಾಲೆಗೆ ಸೇರಿಸಿದರಷ್ಟೇ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳದೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಕಾನೂನಿನಿಂದ ಮಾತ್ರ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಎಲ್ಲರ ಸಹಕಾರ ಬೇಕು. ಮಕ್ಕಳ ದಿನಾಚರಣೆ ಕೇವಲ ಸಾಂಸ್ಕೃತಿಕವಾಗದೆ, ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ। ರಿತಿಕಾ ಸಿನ್ಹ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಸಂಸ್ಕೃತಿಯನ್ನು ಕಲಿಸಿ ಬೆಳೆಸಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಸಮಾಜ ದುರ್ಬಲವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸಬೇಕು. ಮೂಲ ಸಂಸ್ಕೃತಿಯನ್ನು ಎಂದಿಗೂ ಕೈಬಿಡಬಾರದು ಎಂದರು.