ಸಾರಾಂಶ
ಚಿತ್ರದುರ್ಗ: ಚಿಣ್ಣರಲ್ಲಿನ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಪೂರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ.ಆರ್ ಬಣಕಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2009ರಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡದಲ್ಲಿ ಸ್ಥಾಪನೆ ಮಾಡಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಪೂರ್ಣ ವ್ಯಕ್ತಿತ್ವದ ವಿಕಾಸ ಅಕಾಡೆಮಿಯ ಮುಖ್ಯ ಉದ್ದೇಶವಾಗಿದೆ ಎಂದರು.ಪ್ರತಿವರ್ಷವೂ ಜಿಲ್ಲಾ ಮಟ್ಟದಲ್ಲಿ ಮಕ್ಕಳ ಹಬ್ಬ ಆಯೋಜಿಸುವ ಮೂಲಕ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಮಕ್ಕಳು ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಪರ್ಧೆ ಎಂದು ಪರಿಗಣಿಸದೆ, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು. ಕೊವಿಡ್ ಕಾರಣದಿಂದ ನಿಂತು ಹೋಗಿದ್ದ ಮಕ್ಕಳ ಹಬ್ಬಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಜಾನಪದ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಲಾಗುತ್ತಿದೆ. ಗ್ರಾಮೀಣ ಮಕ್ಕಳ ಬದುಕನ್ನು ಸಶಕ್ತಗೊಳಿಸಲು ಮತ್ತು ಉನ್ನತಿಗೆ ತರಲು ರಚನಾತ್ಮಕ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಕೈಗೊಳ್ಳಲಾಗಿದೆ ಎಂದರು.
ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣ, ಸಾಹಿತ್ಯ, ಸಂಗೀತ ಮತ್ತು ಕಲೆ ಸೇರಿದಂತೆ ಇತರ ವಿಷಯಗಳಲ್ಲಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಲು ಕಾರ್ಯಕ್ರಮಗಳನ್ನು ಬಾಲ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಭಾರತಿ ಆರ್ ಬಣಕಾರ್ ತಿಳಿಸಿದರು. ಮಕ್ಕಳ ಹಬ್ಬ ಚಿಣ್ಣರ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು. ವೀರಗಾಸೆ, ಕಂಸಾಳೆ, ಕೋಲಾಟ, ಜಾನಪದ ಹಾಗೂ ಚಿತ್ರಗೀತೆಗಳಿಗೆ ನೃತ್ಯ, ನಾಟಕ ಸೇರಿದಂತೆ ಮಕ್ಕಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ರಂಜಿಸಿದವು.ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಮಕ್ಕಳ ತಂಡಗಳು ಕಂಸಾಳೆ, ವೀರಗಾಸೆ, ರೂಪಕ, ಕೋಲಾಟ, ಚಿತ್ರಗೀತೆ, ದೇಶಭಕ್ತಿ ಗೀತೆ, ಜಾನಪದ ಗೀತೆಗಳಿಗೆ ನೃತ್ಯ ಮಾಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಬೆಂಕಿಯಲ್ಲಿ ಅರಳಿದ ಹೂ ನಾಟಕ ಪ್ರದರ್ಶಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾ ತಂಡಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಸಿಡಿಪಿಓ ಪವಿತ್ರ, ನಿರೂಪಣಾಧಿಕಾರಿ ವಿಜಯ ಕುಮಾರ್, ಜಿಲ್ಲಾ ಅಂಗವಿಕಲ ಅಭಿವೃದ್ಧಿ ಅಧಿಕಾರಿ ವೀಣಾ, ಶಿಕ್ಷಕರಾದ ಕುಮಾರ್, ಹೊನ್ನಪ್ಪ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))