ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಎಲ್ಲ ಮಕ್ಕಳಲ್ಲೂ ಪ್ರತಿಭೆ ಎಂಬುದು ಇದ್ದೇ ಇರುತ್ತದೆ, ಆದರೆ ಆ ಪ್ರತಿಭೆ ಹೊರತರಲು ಶಿಕ್ಷಕರು ಎಷ್ಟು ಪ್ರೋತ್ಸಾಹ ನೀಡುತ್ತಾರೋ ಅದೇ ರೀತಿ ಪೋಷಕರು ಸಹ ಪ್ರೋತ್ಸಾಹ ನೀಡಿದಾಗ ಮಗುವಿನಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಕೆಡಿಪಿ ಸದಸ್ಯ ರಿಯಾಜ್ ಪಾಷ ತಿಳಿಸಿದರು.ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ವೇದಿಕೆ ಭಯ ಸೇರಿದಂತೆ ವಿವಿಧ ಕಾರಣಗಳಿಂದ ಮಗುವಿನಲ್ಲಿರುವ ಪ್ರತಿಭೆ ಹೊರತರಲು ಆಗುವುದಿಲ್ಲ. ಆದ್ದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು ಎಂದರು.
ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೇಡನಂತರ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್ ಮಾತನಾಡಿ, ಸರ್ಕಾರಿ ಉರ್ದು ಶಾಲೆಗೆ ದಾಖಲಾತಿ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಘಟನೆ ಹಾಗೂ ಶಾಲಾ ಎಸ್.ಡಿ.ಎಂ.ಸಿ ಜೊತೆಗೆ ದಾಖಲಾತಿ ಆಂದೋಲನ ನಡೆಸಿ ಮಕ್ಕಳನ್ನು ದಾಖಲು ಮಾಡಿಸಲಾಗಿತ್ತು. ಜನರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದರು.
ಉರ್ದು ಶಾಲೆಗಳನ್ನು ಉಳಿಸಿಉರ್ದು ಶಾಲೆಯ ಉಳಿವಿಗೆ ಎಲ್ಲಾ ಪೋಷಕರು ಶ್ರಮಿಸಬೇಕು. ಇದೀಗ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಉತ್ತಮವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಮಾಡಿದ್ದಾರೆಂದರು.
ಈ ವೇಳೆ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಇಂತಿಯಾಜ್ ಉನ್ನೀಸಾ, ಶಿಕ್ಷಕರಾದ ರವೀಂದ್ರ ಗೌಡ, ಕೌಸರ್ ಸುಲ್ತಾನ, ನಸ್ರೀನ್ ತಾಜ್, ಶಾಫಿಯಾ ಕೌಸರ್, ಮುಖಂಡರಾದ ಅಬ್ದುಲ್ ವಹಾಬ್, ಷಫೀ ಉಲ್ಲಾ ಇದ್ದರು.