ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ “ಭಾರತ ಸಂವಿಧಾನ ಪುಸ್ತಕ” ಬಹುಮಾನ ಹಾಗೂ ಸಿಹಿ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರುಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಂವಿಧಾನದ ವಿವಿಧ ಅನುಚ್ಛೇದ ಹಾಗೂ ತಿದ್ದುಪಡಿ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ “ಭಾರತ ಸಂವಿಧಾನ ಪುಸ್ತಕ” ಬಹುಮಾನ ಹಾಗೂ ಸಿಹಿ ವಿತರಿಸಲಾಯಿತು. ನಗರದ ಗುಂಚಿ ಚೌಕದಲ್ಲಿರುವ ಮೌಲಾನಾ ಆಜಾದ್ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಖಾಸಿಂ ಸಾಬ್ ಹಾಗೂ ಜೋಯನಾಜ್, ಬಿಕ್ಕೆಗುಡ್ಡ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನ ಹಾಗೂ ಮಂಜು, ಕೋರಾ ಗ್ರಾಮದ ಡಾ: ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಚೇತನ್, ನಗರದ ಎಂಪ್ರೆಸ್ ಕೆಪಿಎನ್ ಶಾಲೆ ವಿದ್ಯಾರ್ಥಿ ಭಾರ್ಗವಿ ಸೇರಿದಂತೆ ೫ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪುಸ್ತಕ ಬಹುಮಾನ ಹಾಗೂ ಸಿಹಿ ವಿತರಿಸಿದರು.ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಭಾರತದಲ್ಲಿ 1901ರಲ್ಲಿ ಶೇ.1ರಷ್ಟಿದ್ದ ಮಹಿಳೆಯರ ಸಾಕ್ಷರತಾ ಪ್ರಮಾಣ ಸಂವಿಧಾನದ ಹಕ್ಕುಗಳಿಂದ ಮಹಿಳೆಯರ ಸಾಕ್ಷರತಾ ಪ್ರಮಾಣ ಈಗ ಶೇ.80ಕ್ಕೆ ತಲುಪಿದೆ ಎಂದು ಸಂವಿಧಾನದ ಮಹತ್ವಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಭಾರತ ಸಂವಿಧಾನವು ನಮ್ಮ ಅಸ್ತಿತ್ವದ ಪ್ರತೀಕ. ಈ ಸುದಿನದಂದು ಸಂವಿಧಾನ ರಚನೆಗೆ ಕೊಡುಗೆ ನೀಡಿರುವ ಮಹನೀಯರ ಪರಿಶ್ರಮದ ಬಗ್ಗೆ ತಿಳಿಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನವು ದೇಶದ ಪ್ರತಿ ಪ್ರಜೆಯ ಸ್ವಾಭಿಮಾನದ ಸಂಕೇತವಾಗಬೇಕು. ಸಂವಿಧಾನದ ಜಾಗೃತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚೊತ್ತಬೇಕು. ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು. ಸಂವಿಧಾನದ ಅರ್ಥ, ಮಹತ್ವ ಹಾಗೂ ಜವಾಬ್ದಾರಿಯನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ತಿಳಿಸಿದರು. ನಂತರ ಡಾ: ಬಿ.ಆರ್. ಅಂಬೇಡ್ಕರ್‌ವಾದಿ, ಭಾಷಣಕಾರ ವಿ.ಎಲ್. ನರಸಿಂಹಮೂರ್ತಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಹನೀಯರಾದ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಭಾರತ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಹಾಗೂ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಡಿಎಲ್‌ಬಿಸಿ ಸದಸ್ಯ ಶ್ರೀಧರ್, ಡಿಡಿಪಿಐ ರಘುಚಂದ್ರ, ಡಿಡಿಪಿಯು ಬಾಲಗುರುಮೂರ್ತಿ, ಬಿಇಓ ಹನುಮಂತಪ್ಪ, ವಿವಿಧ ದಲಿತ ಮುಖಂಡರು ಹಾಗೂ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.