ಮಕ್ಕಳು ಭವಿಷ್ಯದ ಸಂಪತ್ತು: ಮಹಾಂತೇಶ

| Published : Nov 15 2024, 12:31 AM IST

ಸಾರಾಂಶ

ಬರ್ಡ್ಸ್‌ ಸಂಸ್ಥೆಯ ಸಿಇಒ ಪ್ರವೀಣಕುಮಾರ ಮಕ್ಕಳ ಏಳಿಗೆಗಾಗಿ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಸೇವೆಸಲ್ಲಿಸುತ್ತಿದೆ

ಅಮೀನಗಡ: ವಿದ್ಯಾರ್ಥಿಗಳು ಭವಿಷ್ಯದ ದೇಶದ ಸಂಪತ್ತು. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ಗುಣಮಟ್ಟ ಶಿಕ್ಷಣ, ಆಹಾರ ದೊರೆತರೆ ಅವರು ಭವಿಷ್ಯದಲ್ಲಿ ದೇಶದ ಸಂಪತ್ತು ಆಗಲಿದ್ದಾರೆ ಎಂದು ಹುನಗುಂದ ಬರ್ಡ್ಸ್‌ ಸಂಸ್ಥೆ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಮಕ್ಕಳ ದಿನಾಚರಣೆ ಹಾಗೂ ಬೆಂಗಳೂರಿನ ಎಂ.ಸಿ.ಕೆ.ಎಸ್ ಸಂಸ್ಥೆ ಕೊಡಮಾಡಿದ ಇಪ್ಪತ್ತು ಸಾವಿರ ರುಪಾಯಿ ವೆಚ್ಚದ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ಉತ್ತಮ ನಾಗರಿಕರಾಗಬೇಕು. ಭಾರತದಲ್ಲಿ ಮಕ್ಕಳ ಅಪೌಷ್ಠಿಕತೆ ಗುಣಮಟ್ಟದ ಆಹಾರದ ಕೊರತೆ ಕಂಡು ಸರ್ಕಾರಗಳು ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಂಸ್ಥೆಗಳು ಬಿಸಿಯೂಟ, ಹಾಲು ಮೊಟ್ಟೆ ವಿತರಣೆ ಮಾಡುವ ಮೂಲಕ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಪಾಲಕರು ಮಕ್ಕಳನ್ನು ಸಶಕ್ತರನ್ನಾಗಿ ಮಾಡಬೇಕು ಎಂದರು.

ಬರ್ಡ್ಸ್‌ ಸಂಸ್ಥೆಯ ಸಿಇಒ ಪ್ರವೀಣಕುಮಾರ ಮಕ್ಕಳ ಏಳಿಗೆಗಾಗಿ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಸೇವೆಸಲ್ಲಿಸುತ್ತಿದೆ. ಸರ್ಕಾರಿ ಶಾಲೆಗಳು ಗುಣಮಟ್ಗಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಸಿಂಹಾಸನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಂ.ಎಸ್. ಹರಗಬಲ್ ಸ್ವಾಗತಿಸಿ, ಶಿಕ್ಷಕ ಮಲ್ಲಿಕಾರ್ಜುನ ಸಜ್ಜನ ನಿರೂಪಿಸಿ, ಎಸ್.ಎಸ್.ಲಮಾಣಿ ವಂದಿಸಿದರು. ಸಹಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.