ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ

| Published : Nov 16 2025, 02:15 AM IST

ಸಾರಾಂಶ

ಭವ್ಯ ಭಾರತ ನಿರ್ಮಾಣ ಮಕ್ಕಳಿಂದ ಸಾಧ್ಯ, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಮಕ್ಕಳು ಈ ದೇಶದ ಭವಿಷ್ಯ, ದೇಶದ ಆಸ್ತಿ ಅವರಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.ದೇವನಹಳ್ಳಿ ಟೌನ್‌ನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ ಹಾಗೂ ಶಿಕ್ಷಣ ಇಲಾಖೆಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭವ್ಯ ಭಾರತ ನಿರ್ಮಾಣ ಮಕ್ಕಳಿಂದ ಸಾಧ್ಯ, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಮಕ್ಕಳು ಈ ದೇಶವನ್ನು ಮುಂದೆ ನಡೆಸುತ್ತಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯ ರೂಪಿಸುವುದು ನಮ್ಮ ಕೈಯಲ್ಲಿದೆ ಎಂದರು.ಮಕ್ಕಳಿಗೆ ಆರೋಗ್ಯ ಶಿಬಿರ:ಮಕ್ಕಳ ಆರೋಗ್ಯ ಬಹಳ ಮುಖ್ಯ ಎಳೆ ವಯಸ್ಸಿನಲ್ಲೇ ಮಕ್ಕಳ ಆರೋಗ್ಯ ಸರಿಪಡಿಸಿದರೆ ಮಕ್ಕಳು ಮುಂದೆ ಕಾಯಿಲೆ ಬೀಳುವುದು ಕಡಿಮೆ ಆಗುತ್ತದೆ. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣಾ ಶಿಬಿರ ಆಯೋಜಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ ಆಹಾರ, ಸಮತೋಲನ ಆಹಾರ ಅವಶ್ಯಕ. ಆರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಮಕ್ಕಳ ಆರೋಗ್ಯ ಸರಿ ಇದ್ದರೆ ಅವರ ವಿದ್ಯಾಭ್ಯಾಸವು ಸುಗಮವಾಗಿ ಸಾಗಲಿದೆ ಎಂದು ಸಚಿವರು ಹೇಳಿದರು.ಮಕ್ಕಳ ಸಾಧನೆಗೆ ಮೆಚ್ಚುಗೆ:ಮಕ್ಕಳಿಗೆ ದೇಶವನ್ನು ರೂಪಿಸುವ ಶಕ್ತಿ ಇರುತ್ತದೆ. ಜಿಲ್ಲೆಯ ಮಕ್ಕಳು ಜಿಲ್ಲಾ ಮಟ್ಟದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಾಲ ಭವನ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ಸಂತಸದ ವಿಷಯ ಎಂದರು.ಪೋಷಕರಿಗೆ, ಶಿಕ್ಷಕರಿಗೆ ಕಿವಿಮಾತು:ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ತಮ್ಮ ಸ್ವಂತ ಮಕ್ಕಳಂತೆ ಅವರನ್ನು ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯಕ್ಕೆ ಶಿಕ್ಷಕರೆ ಮೂಲ. ಅವರಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿದರೆ ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರಲು ಇದು ಶಿಕ್ಷಕರ ಹೆಚ್ಚಿನ ಒತ್ತು ನೀಡಿ.ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ಗಮನಹರಿಸಿ ಅವರ ವಿದ್ಯಾಭ್ಯಾಸದ ಮಾರ್ಗದರ್ಶನದ ಜೊತೆಗೆ ಮಕ್ಕಳೊಟ್ಟಿಗೆ ಸಮಯ ಕಳೆಯುವುದನ್ನು ಮರೆಯದಿರಿ ಎಂದು ಸಚಿವರು ಕಿವಿ ಮಾತು ಹೇಳಿದರು.ಮಕ್ಕಳ ಕೈಗೆ ಮೊಬೈಲ್ ಕೊಡದಿರಿ:ಓದುವ, ಆಡುವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವುದು ಬಹಳ ಅಪಾಯಕಾರಿ, ಇತ್ತಿಚಿನ ದಿನಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ಹೆಚ್ಚಾಗಿದೆ. ಮೊಬೈಲ್ ಬಳಕೆಯಿಂದ ಮಕ್ಕಳ ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ, ಕಣ್ಣಿಗೂ ಅಪಯಾಕಾರಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಹೇಳಿದರು.ಜಿಲ್ಲಾ ಪಂಚಾತಿತಿ ಸಿಇಒ ಡಾ.ಕೆ.ಎನ್ ಅನುರಾಧ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕಾ ಕೃಷ್ಣ ರೆಡ್ಡಿ, ತಹಸೀಲ್ದಾರ್ ಎಂ. ಅನಿಲ್, ಇಒ ಶ್ರೀನಾಥ್ ಗೌಡ ಸೇರಿದಂತೆ ಅಧಿಕಾರಿಗಳು, ಮಕ್ಕಳು ಉಪಸ್ಥಿತರಿದ್ದರು.