ಮಕ್ಕಳಲ್ಲಿ ಸಂತಸ, ಆತ್ಮವಿಶ್ವಾಸ ಹಾಗೂ ಕಲಿಕೆಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪಾನಗಂಟಿ ಫೌಂಡೇಶನ್ ವತಿಯಿಂದ ಕೊಪ್ಪಳ ನಗರದ ಧನ್ವಂತರಿ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ನೋಟ್‌ಬುಕ್ ವಿತರಿಸಿ, ಸಿಹಿ ಹಂಚಲಾಯಿತು.

ಕೊಪ್ಪಳ: ಮಕ್ಕಳಲ್ಲಿ ಸಂತಸ, ಆತ್ಮವಿಶ್ವಾಸ ಹಾಗೂ ಕಲಿಕೆಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪಾನಗಂಟಿ ಫೌಂಡೇಶನ್ ವತಿಯಿಂದ ನಗರದ ಧನ್ವಂತರಿ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ನೋಟ್‌ಬುಕ್ ವಿತರಿಸಿ, ಸಿಹಿ ಹಂಚಲಾಯಿತು.

ಪಾನಗಂಟಿ ಫೌಂಡೇಶನ್ ಕಾರ್ಯದರ್ಶಿ ಶಾರದಾ ಪಾನಗಂಟಿ ಅವರು ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ನೋಟ್‌ಬುಕ್ ವಿತರಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿದರು. ಮಕ್ಕಳೊಂದಿಗೆ ಸಿಹಿ ಹಂಚಿಕೊಂಡು ಅವರ ಸಂಭ್ರಮದಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾರದಾ ಪಾನಗಂಟಿ, ಮಕ್ಕಳ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ ಹಾಗೂ ಸರ್ವತೋಮುಖ ಬೆಳವಣಿಗೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ದಿನವಾಗಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳೇ ದೇಶದ ನಿಜವಾದ ಸಂಪತ್ತು. ಅವರ ಹಿತರಕ್ಷಣೆ ಹಾಗೂ ಉಜ್ವಲ ಭವಿಷ್ಯ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳು ದೊರೆಯಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಪಾನಗಂಟಿ ಫೌಂಡೇಶನ್‌ನ ಈ ಸೇವಾ ಕಾರ್ಯವು ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಂತಸ ಮೂಡಿಸುವ ಜತೆಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಮಾಜದ ಪ್ರತಿಯೊಬ್ಬರೂ ನೆರವಾಗಬೇಕು ಎಂಬ ಸಂದೇಶ ಸಾರಿತು.

ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಚಕ್ರಸಾಲಿ, ಶಿಕ್ಷಕಿಯರಾದ ಪೂರ್ಣಿಮಾ, ಮಹಾಲಕ್ಷ್ಮಿ, ಪಾನಗಂಟಿ ಫೌಂಡೇಶನ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.