ಮಕ್ಕಳು ಭವಿಷ್ಯದ ದೇಶ ಕಟ್ಟುವ ಕಟ್ಟಾಳುಗಳು: ಸರ್ವಮಂಗಳ

| Published : Nov 18 2025, 12:02 AM IST

ಸಾರಾಂಶ

ಶಾಲೆಯ ಆವರಣದಲ್ಲಿ ಸಿದ್ಧಪಡಿಸಿದ ಪೋಟೋ ಸೆಲ್ಫಿ ಕಾರ್ನರ್ ನಲ್ಲಿ ಪೋಷಕರು ಹಾಗೂ ಅವರ ಮಕ್ಕಳ ಪೋಟೋವನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಕನ್ನಡಪ್ರಭ ದಾಬಸ್‍ಪೇಟೆ

ಶಿಕ್ಷಣ, ಆರೋಗ್ಯ, ಸುರಕ್ಷತೆ, ಸ್ವಾವಲಂಬನೆ, ಮೂಲಭೂತ ಸೌಲಭ್ಯ ಒದಗಿಸಿಕೊಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಸಂಭ್ರಮಿಸಿದ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಎಂದು ಬಿ.ಆರ್. ಪಿ ಸರ್ವಮಂಗಳ ತಿಳಿಸಿದರು.

ಸೋಂಪುರ ಹೋಬಳಿಯ ಗೋವಿಂದಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳೇ ದೇಶದ ಅಮೂಲ್ಯ ಆಸ್ತಿ, ದೇಶ ಕಟ್ಟುವ ಕಟ್ಟಾಳುಗಳು, ಭವಿಷ್ಯವನ್ನು ಬರೆಯುವ ಶಿಲ್ಪಿಗಳಾಗಿದ್ದು, ಪ್ರತಿ ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಕಾರ್ಯರೂಪಕ್ಕೆ ತರುವ ಛಲ ಬೆಳೆಸಬೇಕು ಎಂದು ಹೇಳಿದರು. ದೇಶದ ಮೊದಲ ಪ್ರಧಾನಿ ನೆಹರುರವರು ಪಂಚವಾರ್ಷಿಕ ಯೋಜನೆ, ಪಂಚಶೀಲತತ್ವಗಳನ್ನು ಜಾರಿಗೊಳಿಸಿ ವಿಶ್ವವೇ ತಿರುಗಿನೋಡುವಂತೆ ಮಾಡಿದ ಧೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಮಾತನಾಡಿ, ನೆಹರು ಮಕ್ಕಳ ಬಗ್ಗೆ ಅಗಾಧವಾದ ಒಲವನ್ನು ಇಟ್ಟುಕೊಂಡಿದ್ದರು. ದೇಶವನ್ನು ಅಭಿವೃದ್ಧಿಗೊಳಿಸಲು ಹಗಲಿರುಳು ಯೋಜನೆಗಳ ಮೂಲಕ ಶ್ರಮಿಸಿದ್ದರು ಎಂದು ಬಣ್ಣಿಸಿದರು.

ಕಿರುನಾಟಕ ಪ್ರದರ್ಶನ:

ಸರ್ಕಾರಿ ಶಾಲೆಯಲ್ಲಿ ದೊರೆಯುವ ಪ್ರೋತ್ಸಾಹದಾಯಕ ಯೋಜನೆಗಳು ಹಾಗೂ ಶೈಕ್ಷಣಿಕ ಗುಣಮಟ್ಟದ ಬಗ್ಗೆ ‘ಸರ್ಕಾರಿ ಶಾಲೆ ಉಳಿಸಿ’ ಎಂಬ ಕಿರು ನಾಟಕ ವೀಕ್ಷಿಸುವ ಮೂಲಕ ಸರ್ಕಾರಿ ಶಾಲೆಯ ಪ್ರಯೋಜನಗಳ ಅರಿವು ಮೂಡಿಸಲಾಯಿತು.

ಗಮನ ಸೆಳೆದ ಸೆಲ್ಪಿ ಕಾರ್ನರ್:

ಶಾಲೆಯ ಆವರಣದಲ್ಲಿ ಸಿದ್ಧಪಡಿಸಿದ ಪೋಟೋ ಸೆಲ್ಫಿ ಕಾರ್ನರ್ ನಲ್ಲಿ ಪೋಷಕರು ಹಾಗೂ ಅವರ ಮಕ್ಕಳ ಪೋಟೋವನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಮಾರುತಿ, ಗ್ರಾಪಂ ಸದಸ್ಯ ಹನುಮಯ್ಯ, ಊರಿನ ಹಿರಿಯರಾದ ರಾಮಕೃಷ್ಣಯ್ಯ, ತಾಪಂ ಮಾಜಿ ಸದಸ್ಯೆ ಹನುಮಕ್ಕ, ಆನಂದ್ ಕುಮಾರ್ ಸೇರಿ ಸುಮಾರು 40ಕ್ಕೂ ಹೆಚ್ಚು ಪೋಷಕರು, ಶಿಕ್ಷಕರು ಭಾಗವಹಿಸಿದ್ದರು.