ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕಿನ ಘಡಿವಡಿಕಿ ಗ್ರಾಮದ ಆರಾಧ್ಯ ದೇವಿ ಮಹಾಲಕ್ಷ್ಮೀ ಜಾತ್ರೆ ಸಂದರ್ಭದಲ್ಲಿ ನಡೆಯುವ ರಥದ ಮೇಲಿಂದ ಮಕ್ಕಳನ್ನು ಕೆಳಕ್ಕೆ ಎಸೆಯುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ.
ಮಕ್ಕಳಿಗೆ ಅನಾರೋಗ್ಯವಾದ ಸಂದರ್ಭದಲ್ಲಿ ಘಡಿವಡಿಕಿ ಮಹಾಲಕ್ಷ್ಮೀಗೆ ಹರಕೆ ಹೊರುವ ಪದ್ಧತಿ ಬಹು ವರ್ಷಗಳಿಂದ ಪ್ರಚಲಿತದಲ್ಲಿದ್ದು, ಹರಕೆ ಹೊತ್ತ ಬಳಿಕ ಮಗುವಿಗೆ ಆರೋಗ್ಯ ಚೇತರಿಸುತ್ತದೆ ಎಂಬ ನಂಬಿಕೆ ಇದೆ.
ಆ ರೀತಿ ಹರಕೆ ಹೊತ್ತ ಮಗುವನ್ನು ಜಾತ್ರೆಯ ಸಂದರ್ಭದಲ್ಲಿ ರಥದಿಂದ ಕೆಳಕ್ಕೆ ಎಸೆಯಲಾಗುತ್ತದೆ. ಈ ರೀತಿ ಹರಕೆ ಹೊತ್ತ ಸಾವಿರಾರು ಮಕ್ಕಳು ಬದುಕುಳಿದಿವೆ. ರಥದಿಂದ ಕೆಳಕ್ಕೆ ಎಸೆದರೂ ಏನೂ ಆಗೊಲ್ಲ ಎಂದು ಗ್ರಾಮದ ಪ್ರಮುಖರು ಹೇಳುತ್ತಾರೆ.
ಅಧಿದೇವತೆ ಮಹಾಲಕ್ಷ್ಮೀಯ ಕಂಬಳಿಯನ್ನು ರಥದ ಮುಂಭಾಗದಲ್ಲಿ ಹಾಸಲಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ರಥದ ಮೇಲ್ಭಾಗಕ್ಕೆ ಕೊಟ್ಟು ಮಹಾಲಕ್ಷ್ಮೀ ಆಶೀರ್ವದಿಸಲಾಗುತ್ತದೆ.
ಹೀಗೆ ಮೇಲಿಂದ ಕೆಳಕ್ಕೆ ಬೀಳುವ ಮಕ್ಕಳನ್ನು ಭಕ್ತರು ರಕ್ಷಣೆ ಮಾಡಿ ಮರಳಿ ಪಾಲಕರ ಕೈಗೆ ತಲುಪಿಸುವ ಪದ್ಧತಿ ನಡೆದುಬಂದಿದೆ. ಇಲ್ಲಿವರೆಗೂ ಯಾವುದೇ ಅವಾಂತರಗಳು ನಡೆದಿಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಜಾತ್ರೆಯಲ್ಲಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಎರಡು ರಥಗಳನ್ನು ಎಳೆದರು. ಮಕ್ಕಳನ್ನು ರಥದ ಮೇಲಿಂದ ಎಸೆಯುವ ಸಂಪ್ರದಾಯ ಪುರುಷರ ರಥೋತ್ಸವದಲ್ಲಿ ಮಾತ್ರ ಕಂಡು ಬಂದಿತು.