ಸಾರಾಂಶ
ಚನ್ನಪಟ್ಟಣ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವ್ಯಾಸಂಗ ಮಾಡಿ ಪ್ರಜ್ಞಾವಂತ ನಾಗರಿಕರಾಗಿ ದೇಶಕ್ಕೆ ಮಹತ್ತರ ಕೊಡುಗೆ ನೀಡುವ ಶಕ್ತಿಗಳಾಗಬೇಕು ಎಂದು ಭಾರತ್ ವಿಕಾಸ್ ಪರಿಷದ್ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಎಸ್.ಮೋಹನ್ ಸಲಹೆ ನೀಡಿದರು. ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿಯ ಆದರ್ಶ ವಿದ್ಯಾಲಯದಲ್ಲಿ ಭಾರತ ವಿಕಾಸ ಪರಿಷದ್, ಚನ್ನಪಟ್ಟಣ ಕಣ್ವ ಶಾಖೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಹಿಂದಿನ ಮತ್ತು ಇಂದಿನ ಶಿಕ್ಷಣದ ವ್ಯವಸ್ಥೆ ಹಾಗೂ ಗುಣಮಟ್ಟ ಕುರಿತು ತಿಳಿಸಿದರು. ಇಂದಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ. ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ದೇಶ ಭಕ್ತಿ ಕಲಿಸಬೇಕು ಎಂದು ಸಲಹೆ ಮಾಡಿದರು. ಮುಖ್ಯ ಶಿಕ್ಷಕ ಸಿ.ವಿ.ಜಯಣ್ಣ ಮಾತನಾಡಿ, ಸರ್ಕಾರ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದೆ. ಸರ್ಕಾರಿ ಸೌಲಭ್ಯಗಳ ಜತೆಗೆ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ. ಉತ್ತಮ ಭವಿಷ್ಯ ರೂಪಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣದ ಶಿಲ್ಪಿಗಳಾಗಿ ಎಂದು ಸಲಹೆ ನೀಡಿದರು.
ಭಾವಿಪ ಕಣ್ವ ಶಾಖೆಯ ಅಧ್ಯಕ್ಷ ಪಿ.ಗುರುಮಾದಯ್ಯ ೨೦೨೩-೨೪ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಹಾಗೂ ಭಾವಿಪ ಸದಸ್ಯರ ಪ್ರತಿಭಾವಂತ ಮಕ್ಕಳಾದ ಸಿಂಚನ ಸಿ.ಬಿ.ಗೌತಮಿ, ಮೌರ್ಯಶ್ರೀ, ಯಶಸ್ವಿನಿ, ಕಾವ್ಯ, ಅಖಿಲೇಶ್.ಎಂ.ಎಲ್., ಹರ್ಷನ್‌ಗೌಡ, ಪೂರ್ವಿಕ, ಮಾನ್ಯ.ಸಿ.ಎಸ್ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಮತ್ತು ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ತನುಜರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬೋರೇಗೌಡ, ಭಾವಿಪ ದಕ್ಷಿಣ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ಪಾಲಿಟೆಕ್ನಿಕ್ ಉಪನ್ಯಾಸಕಿ ಅನುರಾಧ, ಭಾವಿಪ ರಾಮನಗರ ವಾಲ್ಮೀಕಿ ಶಾಖೆಯ ಅಧ್ಯಕ್ಷ ರಾ.ಶಿ.ಬಸವರಾಜು, ಚಂದ್ರಿಕಾ, ಖಜಾಂಚಿ ಬೆಸ್ಕಾಂ ಎಸ್.ಶಿವಲಿಂಗಯ್ಯ, ಗುರುಮಲ್ಲಯ್ಯ ಇತರರಿದ್ದರು.