ಈ ಕುಟುಂಬದಲ್ಲಿ ಹುಟ್ಟಿದ ಮಕ್ಕಳು 6 ವರ್ಷವಾಗುತ್ತಿದ್ದಂತೆ ಅಂಗವಿಕಲರಾಗ್ತಾರೆ

| Published : Mar 01 2024, 02:17 AM IST

ಸಾರಾಂಶ

ಒಂದಲ್ಲ ಎರಡಲ್ಲ ಮೂರು ಮಕ್ಕಳು ಹೀಗೆ ಆಗಿವೆ. ತಂದೆ ತಾಯಿಗೆ ಮಕ್ಕಳನ್ನು ಜೋಪಾನ ಮಾಡುವುದೇ ಕಾಯಕವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಈ ಮಕ್ಕಳು ಹುಟ್ಟಿದಾಗ ಎಲ್ಲ ಮಕ್ಕಳಂತೆಯೇ ಇರುತ್ತವೆ. ಓಡಾಡಿಕೊಂಡು ಇರುತ್ತಾರೆ. ಆದರೆ, 6 ವರ್ಷ ಆಗುತ್ತಿದ್ದಂತೆ ಕೈಕಾಲು ಸ್ವಾಧೀನ ಕಳೆದುಕೊಳ್ಳುತ್ತಾರೆ. ಎದ್ದು ಓಡಾಡಲು ಆಗುವುದಿಲ್ಲ, ನಿತ್ಯ ಕರ್ಮ ಸೇರಿದಂತೆ ಎಲ್ಲದಕ್ಕೂ ಪರರನ್ನೇ ಆಶ್ರಯಿಸುವ ದುಸ್ಥಿತಿ.

ಹೀಗೆ, ಒಂದಲ್ಲ ಎರಡಲ್ಲ ಮೂರು ಮಕ್ಕಳು ಹೀಗೆ ಆಗಿವೆ. ತಂದೆ ತಾಯಿಗೆ ಮಕ್ಕಳನ್ನು ಜೋಪಾನ ಮಾಡುವುದೇ ಕಾಯಕವಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಜತೆಗೆ ಸ್ವಾಧೀನ ಇಲ್ಲದ ಮೂರು ಮಕ್ಕಳನ್ನು ಕಟ್ಟಿಕೊಂಡು ಪಾಲಕರು ಏಗುತ್ತಿದ್ದಾರೆ.ಕುಕನೂರು ತಾಲೂಕಿನ ಬಳಿಗೇರಿ ಗ್ರಾಮದ ನಿವಾಸಿಗಳಾದ ಹನುಮಂತ ವಣಗೇರಿ- ಹನುಮವ್ವ ವಣಗೇರಿ ಎಂಬ ದಂಪತಿಯೇ ಇಂಥ ಕಷ್ಟದಲ್ಲಿ ಕೈ ತೊಳೆಯುತ್ತಿರುವುದು.ಇರುವುದಕ್ಕೂ ಮನೆ ಅಷ್ಟಕಷ್ಟೆ. ಇನ್ನು ಎಕರೆ ಭೂಮಿಯೂ ಇಲ್ಲ. ಇಂಥದ್ದರಲ್ಲಿ ಈ ಮಕ್ಕಳನ್ನು ಜೋಪಾನ ಮಾಡುವುದೇ ಕಾಯಕವಾಗಿರುವುದರಿಂದ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದೆ.ಬಾಳೇಶನಿಗೆ ಈಗ 18 ವರ್ಷ. ಹುಟ್ಟಿದ ಆರು ವರ್ಷದ ನಂತರ ಕೈಕಾಲು ಸ್ವಾಧೀನಕಳೆದುಕೊಂಡಿದ್ದಾನೆ. ಈತನ ನಂತರ ಒಂದು ವರ್ಷಕ್ಕೆ ಪುಟ್ಟರಾಜ ಹುಟ್ಟಿದ್ದಾನೆ, ಈಗ 17 ವರ್ಷ. ಮೊದಲ ಮಗು 6 ವರ್ಷಕ್ಕೆ ಸ್ವಾಧೀನ ಕಳೆದುಕೊಂಡಿದ್ದಾನೆ. ಎರಡನೇ ಮಗುವಾದರೂ ಸರಿಯಾದೀತು ಎನ್ನುವ ನಿರೀಕ್ಷೆಯಲ್ಲಿದ್ದರು. ಅಚ್ಚರಿ ಎಂದರೆ ಆ ಮಗು ಸಹ ಸರಿಯಾಗಿ 6 ವರ್ಷ ತುಂಬುತ್ತಿದ್ದಂತೆ ಕೈಕಾಲು ಸ್ವಾಧೀನ ಕಳೆದುಕೊಂಡಿದ್ದಾನೆ.ಮತ್ತೊಂದು ಮಗು ನಾಲ್ಕು ವರ್ಷದ ನಂತರ ಹುಟ್ಟುತ್ತದೆ. ಹೆಣ್ಣು ಮಗುವಿಗೆ ಕಲ್ಪನಾ ಎಂದು ಹೆಸರಿಡುತ್ತಾರೆ. ಈ ಮಗು ಸಹ ಸರಿಯಾಗಿ 6 ವರ್ಷವಾಗುತ್ತಿದ್ದಂತೆ ಕೈಕಾಲು ಸ್ವಾಧೀನ ಕಳೆದುಕೊಳ್ಳುತ್ತದೆ. ಈಕೆಯೂ ಈಗ 14 ವರ್ಷದವಳಾಗಿದ್ದರೂ ಎಲ್ಲದಕ್ಕೂ ಮತ್ತೊಬ್ಬರ ಮೇಲೆ ಆಸರೆಯಾಗಿದ್ದಾಳೆ.ಈಗ ಮೂರು ಮಕ್ಕಳು ಹಾಸಿಗೆಯಲ್ಲಿ ಇರುತ್ತಾರೆ. ಕೂಡಿಸಿದರೆ ಕುಳಿತುಕೊಳ್ಳುತ್ತಾರೆ, ಮಲಗಿಸಿದರೆ ಮಲಗುತ್ತಾರೆ. ಒಂದು ಗ್ಲಾಸ್ ನೀರು ಸಹ ತೆಗೆದುಕೊಂಡು ಕುಡಿಯಲು ಆಗುವುದಿಲ್ಲ. ಎಲ್ಲದಕ್ಕೂ ತಂದೆ-ತಾಯಿಯೇ ಬೇಕು. ನಿತ್ಯ ಕರ್ಮಗಳು ಸೇರಿದಂತೆ ಊಟ ಸಹ ತಂದೆ-ತಾಯಿಯೇ ಕೈಯಾರ ಮಾಡಿಸಬೇಕು.ದುಸ್ತರವಾದ ಬದುಕು: ಬದುಕಲು ಎಕರೆ ಭೂಮಿ ಇಲ್ಲ, ಸಮರ್ಪಕ ಸೂರು ಇಲ್ಲ. ಇಂಥ ಸ್ಥಿತಿಯಲ್ಲಿ ಹನುಮಪ್ಪ ಹಾಗೂ ಹನುಮವ್ವ ಈ ಮಕ್ಕಳನ್ನು ಸಾಕಿ, ಸಲುಹಬೇಕು.ಮೂರು ಮಕ್ಕಳನ್ನು ನಿತ್ಯವೂ ಜೋಪಾನ ಮಾಡುವುದೇ ತಂದೆ-ತಾಯಿ ಕೆಲಸ ಆಗಿರುವುದರಿಂದ ಬೇರೆ ಕಡೆ ದುಡಿಮೆಗೆ ಹೋಗಲು ಆಗುತ್ತಿಲ್ಲ. ಈಗಂತೂ ನಾವಿದ್ದೇವೆ, ಜೋಪಾನ ಮಾಡುತ್ತಿದ್ದೇವೆ, ನಮಗೆ ವಯಸ್ಸಾದ ಮೇಲೆ ಹೇಗೆ ಎಂದು ಪಾಲಕರು ಚಿಂತೆಗೀಡಾಗಿದ್ದಾರೆ.ಅಂಗವಿಕಲರ ಮಾಸಾಶನವೇ ಈಗ ಜೀವನ ನಿರ್ವಹಣೆಗೆ ಆಸರೆಯಾಗಿದೆ. ಮಕ್ಕಳು ಇಂದಲ್ಲ ನಾಳೆ ಸುಧಾರಣೆಯಾಗುತ್ತಾರೆ ಎಂದು ಆಸ್ಪತ್ರೆ ಸುತ್ತಿದ್ದು ಆಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.ಈಗ ಆಗಾಗ ಆರೋಗ್ಯ ಸಮಸ್ಯೆಯಾದಾಗಲೂ ಅವರನ್ನು ಕರೆದುಕೊಂಡು ಆಸ್ಪತ್ರೆಗೂ ಹೋಗುವುದಕ್ಕೂ ಕಾಸಿರುವುದಿಲ್ಲ. ಜೀವನ ನಿರ್ವಹಣೆಗೆ ದೇವರೇ ಕಾಪಾಡಬೇಕು ಎನ್ನುವಂತಾಗಿದೆ ಈ ಕುಟುಂಬದ್ದು. ಇದೆಲ್ಲವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಹನುಮವ್ವ, ನಮ್ಮ ಪಾಡು ಯಾವ ವೈರಿಗೂ ಬರಬಾರದು ನೋಡ್ರಿ. ನಿತ್ಯವೂ ಮಕ್ಕಳನ್ನು ಜೋಪಾನ ಮಾಡುವುದೇ ಕಾಯಕವಾಗಿದೆ. ನಮಗೂ ಇತ್ತೀಚೆಗೆ ವಯಸ್ಸಾಗುತ್ತಿರುವುದರಿಂದ ಎತ್ತಿ ಹಾಕಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಾರೆ.ಆರ್ಥಿಕ ಸಮಸ್ಯೆ ಜತೆಗೆ ಮಕ್ಕಳ ಅಂಗವಿಕಲತೆ ಸಮಸ್ಯೆಯಿಂದ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಸಹಾಯಹಸ್ತಕ್ಕಾಗಿ ಕೈ ಚಾಚುವಂತಾಗಿದೆ. 8310881188 ಸಂಖ್ಯೆಯಲ್ಲಿ ಇವರು ಲಭ್ಯವಿದ್ದಾರೆ. ನೆರವು ನೀಡುವವರು ಖುದ್ದು ಕರೆ ಮಾಡಿ, ನೆರವು ನೀಡಬಹುದು.ನಮ್ಮ ಗೋಳು ಹೇಳತೀರದಾಗಿದೆ. ಆರು ವರ್ಷದವರಾಗುತ್ತಿದ್ದಂತೆ ಮಕ್ಕಳು ಕೈಕಾಲು ಸ್ವಾಧೀನ ಕಳೆದುಕೊಂಡಿದ್ದಾರೆ. ಮೂರು ಮಕ್ಕಳು ಅದೇ ಸ್ಥಿತಿಯಲ್ಲಿದ್ದಾರೆ ಎನ್ನುತ್ತಾರೆ ಬಳಿಗೇರಿ ಗ್ರಾಮದ ಹನುಮಪ್ಪ ವಣಗೇರಿ.