ಮಕ್ಕಳು ದೇವರ ಸಮಾನ: ನ್ಯಾಯಮೂರ್ತಿ ಶ್ರೀಕಾಂತ್

| Published : Nov 15 2024, 12:32 AM IST

ಸಾರಾಂಶ

ರಾಜ್ಯ ಸರ್ಕಾರವು ಮಕ್ಕಳ ಸ್ವಾತಂತ್ರ್ಯ, ಆರೋಗ್ಯ, ವಿಕಸನಕ್ಕೆ ಅನುವಾಗುವಂತಹ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಿ ದೌರ್ಜನ್ಯಕ್ಕೆ ತುತ್ತಾಗದಂತೆ ಸಂರಕ್ಷಿತ ವಾತಾವರಣ ಒದಗಿಸಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಹೇಳಿದರು. ಕೊಳ್ಳೇಗಾಲದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಕ್ಕಳನ್ನು ದೇವರ ಸಮಾನ ಎನ್ನುವ ಸಂಸ್ಕೃತಿ ನಮ್ಮ ದೇಶದ್ದು, ನಮ್ಮ ದೇಶದ ಸಂವಿಧಾನವು ಸಹ ಮಕ್ಕಳಿಗೆ ವಿಶೇಷ ಸ್ಥಾನ ನೀಡಿದ್ದು ರಾಜ್ಯ ಸರ್ಕಾರವು ಮಕ್ಕಳ ಸ್ವಾತಂತ್ರ್ಯ, ಆರೋಗ್ಯ, ವಿಕಸನಕ್ಕೆ ಅನುವಾಗುವಂತಹ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಿ ದೌರ್ಜನ್ಯಕ್ಕೆ ತುತ್ತಾಗದಂತೆ ಸಂರಕ್ಷಿತ ವಾತಾವರಣ ಒದಗಿಸಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಹೇಳಿದರು.

ಪಟ್ಟಣದ ಗೀತಾ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ, ಗೀತಾ ಪ್ರೈಮರಿ, ಎಮ್‌ಸಿಕೆಸಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲಾ ವ್ಯಕ್ತಿಗಳು ಶಿಕ್ಷಣವನ್ನು ಪಡೆದಾಗ ಮಾತ್ರ ನಾವು ಜಗತ್ತಿನಲ್ಲಿ ಶಾಂತಿ ಹೊಂದಲು ಸಾಧ್ಯ. ಪ್ರತಿ ಮಗು ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ, ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಲು ಪ್ರತಿಯೊಬ್ಬ ಪೋಷಕರು ಮುಂದಾಗಬೇಕು, ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಅರಿವನ್ನು ಪಡೆದುಕೊಳ್ಳಬೇಕು, ಅವರ ಹಕ್ಕುಗಳನ್ನು ಕಸಿಯುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದರು.

ಮಕ್ಕಳ ಹಕ್ಕುಗಳು, ಮಕ್ಕಳ ಸಂರಕ್ಷಣೆ ಕುರಿತು ಹಿರಿಯ ವಕೀಲ ವೆಂಕಟಾಚಲ ಮಾತನಾಡಿ, ಮುಗ್ಧ ಮಕ್ಕಳ ಮನಸ್ಸಲ್ಲಿ ಉತ್ತಮ ವಿಚಾರಗಳನ್ನು ಬಿತ್ತಬೇಕಿದೆ, ಅವರನ್ನು ಪ್ರೀತಿಯಿಂದ ಗೌರವಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪೋಷಕರ ಪಾತ್ರ ಅಗಾಧವಾದುದು ಎಂದರು. ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸುನಿತಾ, ಮುಖ್ಯ ಶಿಕ್ಷಕ ವೆಂಕಟೇಶ, ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ಉಪಾಧ್ಯಕ್ಷೆ ಸಿ.ಆರ್.ನಿರ್ಮಲ, ಹಿರಿಯ ವಕೀಲ ಮಲ್ಲಿಕಾರ್ಜುನ ಇನ್ನಿತರರಿದ್ದರು.