ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಲ್ಲಿ ಕಲಿಯುವ ಆಸಕ್ತಿ ಅಪಾರವಾಗಿರುತ್ತದೆ. ಕುತೂಹಲಕಾರಿ ಮನಸ್ಸೂ ಇರುತ್ತದೆ. ಆದ್ದರಿಂದ, ಯಾವುದೇ ವಿಷಯ ಕುರಿತು ಮಕ್ಕಳಿಗೆ ರಂಜನೀಯವಾಗಿ ಕಲಿಸಿದರೆ, ಅವರು ಬಹುಬೇಗನೆ ಗ್ರಹಿಸಿ ಕಲಿಯುತ್ತಾರೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ ಅಭಿಪ್ರಾಯಪಟ್ಟರು.

ವಿಜಯನಗರದ 3ನೇ ಹಂತದಲ್ಲಿನ ವಿ.ಕೆ. ಪಬ್ಲಿಕ್ ಸ್ಕೂಲ್ ನಲ್ಲಿ ಅದಮ್ಯ ರಂಗಶಾಲೆಯ ವತಿಯಿಂದ ಆಯೋಜಿಸಿರುವ ಬಾಲಂಗೋಚಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಜೊತೆಗೆ ಉತ್ತಮ ಗುಣ ಕಲಿಯಬೇಕು. ಹೆತ್ತವರಿಗೆ, ಗುರುಗಳಿಗೆ ಗೌರವ ಕೊಡಬೇಕು. ಅವರ ಮಾತು ಕೇಳಬೇಕು. ನೆರೆಹೊರೆಯವರೊಂದಿಗೆ, ಸ್ನೇಹಿತರೊಂದಿಗೆ ಪ್ರೀತಿ, ವಿಶ್ವಾಸ ಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ಚಿಕ್ಕವರಾಗಿದ್ದಾಗಲೇ ಎಲ್ಲರ ಜೊತೆಗೆ ಹೊಂದಿಕೊಂಡು ಹೋಗುವ ಸೌಹಾರ್ದ ಗುಣ ಬೆಳೆಸಿಕೊಂಡರೆ, ಉತ್ತಮ ನಾಗರಿಕರಾಗಬಹುದು‌. ಸಮಾಜಕ್ಕೆ ಸದಾ ಒಳ್ಳೆಯದನ್ನು ಮಾಡಬಹುದು. ಅಗ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ. ಆದ್ದರಿಂದ ಸೇವಾಗುಣ ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಮಾತನಾಡಿ, ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿದೆ. ಅವರಲ್ಲಿನ ಪ್ರತಿಭೆಯನ್ನು ಅಭಿವ್ಯಕ್ತಿಸಲು ವೇದಿಕೆಯ ಕಲ್ಪಿಸುತ್ತವೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೂ ಲಭಿಸಬೇಕು. ಇದಕ್ಕೆ ತಾವು ಕೂಡ ಕೈಜೋಡಿಸುವುದಾಗಿ ಎಂದು ಭರವಸೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ವಿ.ಕೆ. ಪಬ್ಲಿಕ್ ಶಾಲೆ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಮಾತನಾಡಿ, ಪಠ್ಯೇತರ ವಿಷಯಗಳಾದ ಹಾಡು, ನಾಟಕ, ಕತೆ, ನೃತ್ಯ, ಸಂಗೀತ ಮೊದಲಾದ ವಿಷಯಗಳನ್ನು ಮಕ್ಕಳು ಕಲಿತು ಪ್ರಕಟಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಧೈರ್ಯದ ಮನೋಭಾವ ಮೈಗೂಡುತ್ತದೆ. ಜೀವನವನ್ನು ಆನಂದದಾಯಕವಾಗಿ ಕಳೆಯಲು ಸಾಧ್ಯವಾಗುತ್ತದೆ. ಮನಸ್ಸಿನ ವಿಕಾಸದ ಜೊತೆಗೆ ತಿಳಿವಳಿಕೆ ಹೆಚ್ಚುತ್ತದೆ ಎಂದರು.

ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ಭಾಷಣ ಮಾಡಿದರು. ರಂಗಶಾಲೆಯ ಗೌರವ ಕಾರ್ಯದರ್ಶಿ ಚಂದ್ರು ಮಂಡ್ಯ, ಸಂಪನ್ಮೂಲ ವ್ಯಕ್ತಿಗಳಾದ ವಿನೋದ್ ಮೈಸೂರು, ಸುಪ್ರೀತ್ ಭಾರದ್ವಾಜ್, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್‌ನ ಆರ್.ಪಿ. ಸತೀಶ್, ಯುವಕವಿ ಜಿ. ರವೀಂದ್ರ ಕುಮಾರ್ ಇದ್ದರು.