ಗದಗ: ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಧರ್ಮ ಸಂಸ್ಕಾರ ಮತ್ತು ಸಂಸ್ಕೃತಿಯೂ ಅಷ್ಟೇ ಮುಖ್ಯವಾಗಿದೆ ಎಂದು ಬನ್ನಿಕೊಪ್ಪ, ಮೈಸೂರು ಅರಮನೆ ಜಪದ ಕಟ್ಟೆಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಶನಿವಾರ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಏರ್ಪಡಿಸಿದ್ದ ಜೀವನ ದರ್ಶನ ಪ್ರವಚನ ಮಾಲಿಕೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಧರ್ಮವು ಧರ್ಮದ ಹಾದಿಯಲ್ಲಿ ಮುನ್ನಡೆಯುವ ಮೂಲಕ ಸತ್ಯ, ಪ್ರಾಮಾಣಿಕತೆ ಮತ್ತು ಸಂಸ್ಕಾರವನ್ನು ರೂಢಿಸುವುದು ಹಾಗೆಯೇ ವಿದ್ಯಾ ಸಂಸ್ಕಾರವು ಬದುಕನ್ನು ರೂಪಿಸಬಲ್ಲದು. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕೆಂದರು.
ಯುವಕರು ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು. ಅಂದಾಗ ಸದೃಢ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಪ್ರತಿ ತಿಂಗಳು ಜೀವನ ದರ್ಶನ ಕಾರ್ಯಕ್ರಮ ಏರ್ಪಡಿಸಿ ಜೀವನದ ದರ್ಶನವನ್ನು ಮಾಡಿಸುತ್ತಿರುವುದು ಅಭಿನಂದನೀಯ ಎಂದರು.ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿ ಹದ, ಫಲವತ್ತತೆಯನ್ನು ಹಾಳು ಮಾಡಿದ್ದೇವೆ. ಇದು ತಪ್ಪಬೇಕು. ಪಾರಂಪರಿಕ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಭೂಮಿಯ ಫಲವತ್ತತೆಯನ್ನು ಉಳಿಸಿದರೆ ಮಾತ್ರ ನಮ್ಮ ಆರೋಗ್ಯ ಸದೃಢಗೊಳ್ಳಬಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ಲ ಮಾತನಾಡಿ, ಸಮಿತಿಯು ಪ್ರತಿ ತಿಂಗಳ ಅಮಾವಾಸ್ಯೆ ದಿನ ಏರ್ಪಡಿಸುತ್ತ ಬಂದಿರುವ ಜೀವನ ದರ್ಶನ ಪ್ರವಚನ ಮಾಲಿಕೆಯು 58 ತಿಂಗಳಿಂದ ಸಾಂಗವಾಗಿ ಸಾಗಿ ಬಂದಿದ್ದು, ಕಿರಿಯರಿಂದ ಹಿರಿಯರ ವರೆಗೆ ಬದುಕು, ಜೀವನ ಶೈಲಿಯೊಂದಿಗೆ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜಾಗೃತಿ ಮೂಡಿಸುತ್ತ ಬಂದಿದೆ. ಜೀವನ ಎಂದರೆ ಏನು ಎಂಬುದನ್ನು ದರ್ಶನ ಮಾಡುತ್ತ ಮುನ್ನಡೆದಿದೆ ಎಂದರು.
ಪ್ರತಿಭಾ ಪುರಸ್ಕಾರ: ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭೂಮಿಕಾ ಖೋಡೆ, ಗೌತಮ ಚೂರಿ, ಶಶಾಂಕ ಶಿವಕುಮಾರ ಕುರಿಯವರ, ಶ್ರೇಯಸ್ ರಾಜಪೂರ, ಪ್ರತೀಕ್ಷಾ ಉಪ್ಪಿನ, ಜ್ಯೋತಿಕಾ ಮಸ್ಕಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಸಾದ ಸೇವೆ ವಹಿಸಿಕೊಂಡಿದ್ದ ಶಿಕ್ಷಕ ಎನ್.ವಿ. ಪಾಟೀಲ, ಸಮಿತಿಯ ಕಾರ್ಯದರ್ಶಿ ಕೆ.ಪಿ. ಗುಳಗೌಡರ, ಕೋಶಾಧ್ಯಕ್ಷ ಎಸ್.ಎಸ್. ಪಾಳೇಗಾರ, ಬಿಎಸ್‌ಎನ್‌ಎಲ್ ನಿವೃತ್ತ ನೌಕರರಾದ ನಿರ್ಮಲಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಚಿಂತಕ ವಸಂತಗೌಡ ಪೊಲೀಸಪಾಟೀಲ ಮಾತನಾಡಿ, ಮೇ 31ರಂದು ಸಂಜೆ 3.30ಕ್ಕೆ ಗದುಗಿನ ವಿಡಿಎಸ್‌ಟಿ ಮೈದಾನದಲ್ಲಿ ಜರುಗಲಿರುವ ಹಿಂದೂ ಸರ್ವ ಸಮಾಜಗಳ ಒಕ್ಕೂಟದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಕುರಿತು ಮಾಹಿತಿ ನೀಡಿ ಎಲ್ಲರೂ ಭಾಗಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಿ.ಕೆ. ಕಡಣಿ ಶಾಸ್ತ್ರಿ ಸಮಿತಿಗೆ ಪುಸ್ತಕಗಳನ್ನು ದೇಣಿಗೆ ನೀಡಿದರು. ಕಸ್ತೂರಿ ಕಮ್ಮಾರ ಪ್ರಾರ್ಥಿಸಿದರು. ವಿ.ಕೆ. ಗುರುಮಠ ಸ್ವಾಗತಿಸಿ, ಪರಿಚಯಿಸಿದರು. ಬಿ.ಎಚ್. ಗರಡಿಮನಿ ನಿರೂಪಿಸಿದರು. ಸಂಗೀತಾ ಕುರಿ ವಂದಿಸಿದರು.ಕಾರ್ಯಕ್ರಮದಲ್ಲಿ ಸುದರ್ಶನ ಹಾನಗಲ್ಲ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ಬಿ.ಎನ್. ಯರನಾಳ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಎಂ.ಕೆ. ತುಪ್ಪದ, ಡಾ. ರಾಜಾಪೂರ, ಡಾ. ಉಪ್ಪಿನ, ಯಾಳಗಿ, ಎ.ಎಸ್. ರಡ್ಡೇರ, ಕನಕೇರಿ, ಪೈಲದ, ಕೊಟಗಿ, ಮಕ್ಕಣ್ಣವರ, ಜಿ.ಎ. ಪಾಟೀಲ, ಗೌರಿಪುರ, ವಿ.ಎಚ್. ದೇಸಾಯಿಗೌಡ್ರ, ಕೊಣ್ಣೂರ ಸೇರಿದಂತೆ ಮುಂತಾದವರಿದ್ದರು.
