ಚಂದ್ರಶೇಖರಯ್ಯ ಅವರು ಶಿಕ್ಷಕ ವೃತ್ತಿಯ ಜೊತೆಗೆ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ಮೂಲಕ ಉತ್ತಮ ಕಲಾವಿದ. ಸಾಹಿತ್ಯ, ಆಡಳಿತಗಾರರಾಗಿ ಸಮಾಜದಲ್ಲಿ ಹೆಸರುಗಳಿಸುವ ಜೊತೆಗೆ ಅಪಾರ ಶಿಷ್ಯಬಳಗವನ್ನು ಕಟ್ಟಿಕೊಂಡಿದ್ದಾರೆ. ‘ಭಯಸಿ ಬಂದದ್ದು ಅಂಹಭೋಗ, ಭಯಸದೆ ಬಂದದ್ದು ಲಿಂಗಭೋಗ’ ಎಂಬ ಮಾತಿನಂತೆ ಚಂದ್ರಶೇಖರಯ್ಯ ಅವರು ಭಯಸದೆ ಎಲ್ಲವನ್ನು ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಹಂತದಲ್ಲಿಯೇ ಜೀವನದ ನೈತಿಕತೆ, ಮೌಲ್ಯ, ವಿನಯತೆ, ಸಂಸ್ಕಾರಗಳನ್ನು ಕಲಿಸಬೇಕಿದೆ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಅವರ ‘ಚಂದ್ರಬಿಂಬ’ ಅಭಿನಂದನಾ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒಬ್ಬ ಶಿಕ್ಷಕರಾಗಿ ಸಮಾಜದಲ್ಲಿ ಹೆಸರುಗಳಿಸಿ ಅಪಾರ ಶಿಷ್ಯ ವೃಂದವನ್ನು ಪಡೆಯುವುದು ಕಷ್ಟಸಾಧ್ಯವಾಗಿದೆ ಎಂದರು.

ಚಂದ್ರಶೇಖರಯ್ಯ ಅವರು ಶಿಕ್ಷಕ ವೃತ್ತಿಯ ಜೊತೆಗೆ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ಮೂಲಕ ಉತ್ತಮ ಕಲಾವಿದ. ಸಾಹಿತ್ಯ, ಆಡಳಿತಗಾರರಾಗಿ ಸಮಾಜದಲ್ಲಿ ಹೆಸರುಗಳಿಸುವ ಜೊತೆಗೆ ಅಪಾರ ಶಿಷ್ಯಬಳಗವನ್ನು ಕಟ್ಟಿಕೊಂಡಿದ್ದಾರೆ. ‘ಭಯಸಿ ಬಂದದ್ದು ಅಂಹಭೋಗ, ಭಯಸದೆ ಬಂದದ್ದು ಲಿಂಗಭೋಗ’ ಎಂಬ ಮಾತಿನಂತೆ ಚಂದ್ರಶೇಖರಯ್ಯ ಅವರು ಭಯಸದೆ ಎಲ್ಲವನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಅವರ ವಿನಯ, ಸೌಮ್ಯಸ್ವಭಾವದ ವ್ಯಕ್ತಿತ್ವವೇ ಕಾರಣವಾಗಿದೆ ಎಂದು ಬಣ್ಣಿಸಿದರು.

ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಜೀವನ ಎಂದರೆ ಸನ್ಯಾಸತ್ವವನ್ನು ಸ್ವೀಕರಿಸುವುದು ಮಾತ್ರವಲ್ಲ. ನಮ್ಮೊಳಗಿರುವ ಅಹಂಕಾರವನ್ನು ತ್ಯಜಿಸಿ ನಿರಾಪೇಕ್ಷೆ ವ್ಯಕ್ತಿಗಳಾಗಿ ಬದುಕುವುದು ಸಹ ಆಧ್ಯಾತ್ಮವೇ. ಚಂದ್ರಶೇಖರಯ್ಯ ಅವರು ಸಹ ಸಮಾಜದಲ್ಲಿ ಆಧ್ಯಾತ್ಮಕ ವ್ಯಕ್ತಿಗಳಾಗಿ ಯಾವುದನ್ನೇ ಅಪೇಕ್ಷೆ ಪಡದೆ ಮಾದರಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಇಂದು ಸಮಾಜದಲ್ಲಿ ಗುಣದ ಹಿಂದೆ ಹೋಗುವುದಕ್ಕಿಂತ ಹಣದ ಹಿಂದೆ ಓಡುವ ಜನರೇ ಹೆಚ್ಚಿದ್ದಾರೆ ಎಂದು ವಿಷಾದಿಸಿದರು.

ಪ್ರೊ.ಬಿ.ನಾರಾಯಣಗೌಡ ಮಾತನಾಡಿ, ಕನ್ನಡ ನಾಡು ಎಂದಿಗೂ ಧರಿದ್ರನಾಡಲ್ಲ. ಜನರಿಗೆ ಅಗತ್ಯ ಇರುವ ಅರಣ್ಯ, ಖನಿಜ, ಜಲ ಸಂಪತ್ತು, ವ್ಯವಸಾಯಕ್ಕೆ ಯೋಗ್ಯ ಕೃಷಿ ಭೂಮಿ, ಭೂಸಂಪತ್ತು, ಮಾನವ ಸಂಪತ್ತು ಎಲ್ಲವು ಇದೆ. ಆದರೆ, ಪ್ರಾಮಾಣಿಕತೆ, ಸತ್ಯ, ಧರ್ಮ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಂದ್ರಶೇಖರಯ್ಯ ಅವರು ಜೀವನದಲ್ಲಿ ಸತ್ಯ, ಧರ್ಮ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಇವೇ ನಮ್ಮ ಜೀವನದ ಆಭರಣಗಳೆಂದು ಬದುಕು ನಡೆಸಿದ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಚಂದ್ರಶೇಖರಯ್ಯ ಅವರ ಚಂದ್ರಬಿಂಬ ಅಭಿನಂದನಾ ಕೃತಿ ಬಿಡುಗಡೆ ಮಾಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಾ.ಬಿ.ಜಯಪ್ರಕಾಶ್ ಗೌಡ ಅಭಿನಂಧನೆ ಭಾಷಣ ಮಾಡಿದರು. ಇದೇ ವೇಳೆ ಚಂದ್ರಶೇಖರಯ್ಯರನ್ನು ಅಭಿನಂಧಿಸಲಾಯಿತು. ಲಂಡನ್ ಮಹದೇವಯ್ಯ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.