ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಹಿರಿಯ ಜೀವಗಳಿಗೆ ಅಸುರಕ್ಷತೆ ಬಹಳ ಕಾಡುತ್ತಿದೆ. ಮಕ್ಕಳು ಉನ್ನತ ಹುದ್ದೆಗಳಲ್ಲಿದ್ದರೂ ತಂದೆ-ತಾಯಿ ಕಡೆಗಣಿಸುತ್ತಿದ್ದಾರೆ. ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಮಾನವೀಯ ಮೌಲ್ಯ ಮರೆತವರು ಎಂದಿಗೂ ವಿದ್ಯಾವಂತರಾಗುವುದಿಲ್ಲ. ಅವರು ಅಕ್ಷರಸ್ಥರಷ್ಟೇ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಕಟುವಾಗಿ ಹೇಳಿದರು.ನಗರ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಲಯನ್ಸ್ ಇಂಟರ್‌ನ್ಯಾಷನಲ್ ೩೧೭ ಜಿ ಏರ್ಪಡಿಸಿದ್ದ ಮೂರನೇ ಜಿಲ್ಲಾ ಮಹಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ತಂದೆ-ತಾಯಿಯನ್ನು ನಮ್ಮ ಕಣ್ಣು ರೆಪ್ಪೆಗಳಂತೆ ಕಾಪಾಡಬೇಕು. ಅವರ ಬಗ್ಗೆ ನಾವು ತಾತ್ಸಾರ ಮಾಡಿದರೆ ವಿದ್ಯಾವಂತರಾಗಿ ಏನು ಪ್ರಯೋಜನ. ಕಷ್ಟಪಟ್ಟು ಬೆಳೆಸಿ ಶಿಕ್ಷಣವಂತರನ್ನಾಗಿ ಮಾಡಿದ ಹಿರಿಯರನ್ನು ಕೊನೆಗಾಲದಲ್ಲಿ ಪಾಲನೆ ಮಾಡಲಾಗದಷ್ಟು ಅಸಮರ್ಥರಾದರೆ ಮಾನವೀಯ ವ್ಯಕ್ತಿಗಳಾಗಿ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ವೃದ್ದಾಪ್ಯದಲ್ಲಿರುವ ಹಿರಿಯ ಜೀವಗಳನ್ನು ಪಾಲನೆ-ಪೋಷಣೆ ಮಾಡುವ ಬಗ್ಗೆ ಲಯನ್ಸ್ ಸಂಸ್ಥೆ ಜನರಲ್ಲಿ ಜಾಗೃತಿ, ಅರಿವು, ತಿಳಿವಳಿಕೆಯನ್ನು ಮೂಡಿಸಬೇಕು. ಮಕ್ಕಳು ಮೊಬೈಲ್ ವ್ಯಸನಿಗಳಾಗುವುದನ್ನು ತಪ್ಪಿಸಬೇಕು. ಮೊಬೈಲ್‌ನಿಂದ ಬುದ್ಧಿ ಬೆಳವಣಿಗೆ ಕಾಣುವುದಿಲ್ಲ. ವ್ಯಕ್ತಿತ್ವ ವಿಕಸನವಾಗುವುದಿಲ್ಲ. ಮಕ್ಕಳಲ್ಲಿ ಮಾನವೀಯ ಗುಣ ಬೆಳೆಸುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಹೇಳಿದರು.ಈ ದೇಶಕ್ಕೆ ಡ್ರಗ್ಸ್ ಎಂಬ ಹೆಮ್ಮಾರಿ ಹೇಗೆ ಕಾಲಿಟ್ಟಿತೋ ಗೊತ್ತಿಲ್ಲ. ಆದರೆ, ಯುವಜನಾಂಗ ಡ್ರಗ್ಸ್‌ಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಯದಿದ್ದರೆ ದೇಶಕ್ಕೆ ದೊಡ್ಡ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಯುವಕರೇ ಈ ದೇಶದ ಶಕ್ತಿಯಾಗಿದ್ದು, ಅವರ ಮಾನಸಿಕ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಕೆ.ಎಲ್. ರಾಜಶೇಖರ, ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಎನ್. ಮೋಹನ್‌ಕುಮಾರ್, ಹೆಚ್ಚುವರಿ ಜಿಲ್ಲಾ ಸಂಪುಟ ಕಾರ್ಯದರ್ಶಿ ನವೀನ್ ಸುಬ್ರಹ್ಮಣ್ಯ, ಉಪ ಜಿಲ್ಲಾ ಗವರ್ನರ್‌ಗಳಾದ ಎನ್. ಮತಿದೇವ್‌ ಕುಮಾರ್, ಟಿ. ನಾರಾಯಣಸ್ವಾಮಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್, ಖಜಾಂಚಿ ಕೆ.ಎನ್. ಸುನೀಲ್‌ಕುಮಾರ್, ಕೆ.ದಿ. ಕರಿಯಪ್ಪ, ಡಾ.ಎನ್. ಕೃಷ್ಣೇಗೌಡ, ಕಾರ್ಯದರ್ಶಿ ಎಂ.ವಿ. ನಂದೀಶ್, ಜಂಟಿ ಕಾರ್ಯದರ್ಶಿ ಆನಂದ್, ಜಂಟಿ ಖಜಾಂಚಿ ಡಿ.ಪಿ. ಪ್ರಕಾಶ್ ಇತರರಿದ್ದರು.

---

೫ಕೆಎಂಎನ್‌ಡಿ-೧

ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಲಯನ್ಸ್ ಇಂಟರ್‌ನ್ಯಾಷನಲ್ ೩೧೭ ಜಿ ಏರ್ಪಡಿಸಿದ್ದ ಮೂರನೇ ಜಿಲ್ಲಾ ಮಹಾ ಸಮ್ಮೇಳನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಅವರನ್ನು ಅಭಿನಂದಿಸಲಾಯಿತು.