ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲೆಯಲ್ಲಿ ಒಟ್ಟು ೨,೬೯೧ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ೩ ವರ್ಷದಿಂದ ೬ ವರ್ಷದೊಳಗಿನ ೬೯,೮೧೩ ಮಕ್ಕಳಿರುವುದಾಗಿ ದಾಖಲಾತಿಗಳಲ್ಲಿ ಲೆಕ್ಕ ಇದೆ. ಆದರೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದ್ದಿದ್ದು ಕಂಡುಬಂದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪೌಷ್ಠಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರು, ಕರ್ನಾಟಕ ರಾಜ್ಯದ ಗೌರವಾನ್ವಿತ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯವರಾದ ಎ.ಎಸ್. ವೇಣುಗೋಪಾಲಗೌಡರವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳಲ್ಲಿನ ಆಯ್ದ ೭೦ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರು ಭೇಟಿ ನೀಡಿದ್ದು, ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಅಂಗನವಾಡಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೂಡಿದ್ದು, ಅಂಗನವಾಡಿ ಕೇಂದ್ರಗಳು ಅನೇಕ ಸಮಸ್ಯೆಗಳಿಂದ ಕೂಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಶೌಚಾಲಯಗಳು ಇಲ್ಲ: ೪೮೩ ಅಂಗನವಾಡಿಗಳನ್ನು ದುರಸ್ತಿ ಮಾಡಬೇಕಿದ್ದು, ದುರಸ್ತಿ ಮಾಡಲು ಸರ್ಕಾರದ ಅನುದಾನ ಇಲ್ಲದೆ ಅಂಗವಾಡಿ ಕೇಂದ್ರಗಳು ಶಿಥಿಲಾವಸ್ಥೆಯನ್ನು ತಲುಪುತ್ತಿವೆ. ೨೪೭೫ ಅಂಗನವಾಡಿಗಳು ಶೌಚಾಲಯವನ್ನು ಹೊಂದಿದ್ದು ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯಗಳು ಇದ್ದು ಇಲ್ಲದಂತಿದ್ದು, ಬಳಸಲು ಅಯೋಗ್ಯವಾಗಿವೆ ಎನ್ನುವಷ್ಟರ ಮಟ್ಟಿಗೆ ಇವೆ. ೨೧೬ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲದೇ ಮಕ್ಕಳು ಮತ್ತು ಅಂಗನವಾಡಿ ಸಿಬ್ಬಂದಿ ಶೌಚ ಕ್ರಿಯೆಗಳಿಗೆ ಪರದಾಡುವಂತಾಗಿದೆ. ೨೪೭ ಅಂಗನವಾಡಿಗಳಲ್ಲಿ ಶೌಚಾಲಯಗಳು ಹಾಳಾಗಿದ್ದು, ದುರಸ್ತಿ ಮಾಡಬೇಕಾಗಿದ್ದು ಸಂಬಂಧಪಟ್ಟ ಇಲಾಖೆ, ಸಂಸ್ಥೆಗಳು ಇದಕ್ಕೆ ಕಾರ್ಯಪ್ರವೃತ್ತವಾಗಬೇಕಿವೆ.ನೀರಿನ ಸೌಲಭ್ಯವಿಲ್ಲ: ೨,೩೭೨ ಅಂಗನವಾಡಿ ಕೇಂದ್ರಗಳು ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿದ್ದು ೩೧೯ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿರದೆ ಮಕ್ಕಳು ಪರದಾಡುವಂತಾಗಿದೆ ಎಂದರು. ೨೪೬೫ ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್ ಸೌಲಭ್ಯವಿದ್ದು ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಫ್ಯಾನ್‌ಗಳು ಇದ್ದು ಇಲ್ಲದಂತಾಗಿವೆ. ೨೨೬ ಅಂಗನವಾಡಿಗಳಲ್ಲಿ ಫ್ಯಾನ್ ಸೌಲಭ್ಯವೇ ಇಲ್ಲದೆ ಬೇಸಿಗೆಯಲ್ಲಿ ಮಕ್ಕಳು ಪರದಾಡುವಂತಾಗಿದೆ ಎಂದು ತಿಳಿಸಿದರು.
ವಿದ್ಯುತ್ ಸಂಪರ್ಕವೇ ಇಲ್ಲ: ೨,೫೦೧ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕವಿದ್ದು, ೧೯೦ ಅಂಗನವಾಡಿಗಳು ವಿದ್ಯುತ್ ಸಂಪರ್ಕವೇ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಹಾಸನ ನಗರದ ಸುತ್ತಮುತ್ತಲಿದ್ದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ನಗರಸಭೆಯು ವಿದ್ಯುತ್ ಸಂಪರ್ಕ ನೀಡದೆ, ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂಬುದು ನ್ಯಾಯಾಧೀಶರು ಭೇಟಿ ನೀಡಿದ ಸಮಯದಲ್ಲಿ ಕಂಡುಬಂದಿದೆ ಎಂದರು.ಪೌಷ್ಠಿಕ ಆಹಾರ ನೀಡಿ: ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಪೌಷ್ಠಿಕ ಅಹಾರವನ್ನು ನೀಡಲಾಗುತ್ತಿದ್ದು, ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಕೆಗೆ ಸರ್ಕಾರ ಮುಂದಾಗಬೇಕಿದೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಅಂಗನವಾಡಿ ಕೇಂದ್ರಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ ಎಂದರು.
ವಿದ್ಯುತ್ ಸಂಪರ್ಕ ಕಡಿತ: ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದ್ದು, ಶಾಲಾ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿದೆಯಾದರೂ ಸುಮಾರು ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಬಿಲ್ಲನ್ನು ಪಾವತಿಸಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಕ್ರಮವಹಿಸುವುದು ಅಗತ್ಯವಿದೆ ಎಂದರು.ಎಷ್ಟೋ ಅಂಗನವಾಡಿಗಳಿಗೆ ಕಾಂಪೌಂಡ್ ಇಲ್ಲ, ಮಕ್ಕಳಿಗೆ ಆಡಲು ಮೈದಾನವಿರುವುದಿಲ್ಲ, ಅಡುಗೆ ಕೋಣೆ, ಊಟದ ಕೋಣೆ, ಮಕ್ಕಳಿಗೆ ಆಟ-ಪಾಠ ಎಲ್ಲವೂ ಒಂದೇ ಕೊಠಡಿಯಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ನ್ಯಾಯಾಧೀಶರು ಅಂಗನವಾಡಿಗೆ ಭೇಟಿ ನೀಡಿರುವ ವಸ್ತುನಿಷ್ಟವಾದ ವರದಿಯ ಆಧಾರದ ಮೇಲೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ ಇದ್ದರು.* ಹೇಳಿಕೆ1
ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲು ನಿಯೋಜಿಸುತ್ತಿದ್ದು, ಈ ಕಾರಣದಿಂದ ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಭೇಟಿ ಸಂದರ್ಭದಲ್ಲಿ ಕಂಡುಬಂದಿದೆ.ಉಷಾರಾಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಮುಖ್ಯಾಂಶಗಳು:* ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ಭೇಟಿ
* ೨೧೬ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲ* ಅಂಗನವಾಡಿ ಕೇಂದ್ರಗಳ ಗುಣಮಟ್ಟ ಹೆಚ್ಚಿಸಬೇಕಿದೆ
* ೧೯೦ ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ* ಬಾಕ್ಸ್‌ನ್ಯೂಸ್:ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳು ಜಿಲ್ಲೆಯಲ್ಲಿ ೧,೮೯೪ ಇದ್ದು, ಪಂಚಾಯಿತಿ ಕಟ್ಟಡ, ಸಮುದಾಯ ಕೇಂದ್ರಗಳು, ಶಾಲಾ ಕೊಠಡಿಗಳಲ್ಲಿ ೪೨೩ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಸಹಭಾಗಿತ್ವದಲ್ಲಿ ೭೧ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಸ್ವಂತ ಕಟ್ಟಡವಿಲ್ಲದೆ ೩೦೩ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.