ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗುವ ಅವಕಾಶವಿದ್ದು, ಬಾಲ ನ್ಯಾಯ ಕಾಯ್ದೆ ಉದ್ದೇಶವೂ ಸಹ ಅವರಿಗೆ ಉತ್ತಮ ಪ್ರಜೆಯಾಗಲು ಅವಕಾಶ ನೀಡುವುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಅಮೃತ ಎಸ್.ರಾವ್ ಹೇಳಿದರು.ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿವಮೊಗ್ಗ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಡಿ.ಎ.ಆರ್. ಸಭಾಂಗಣದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಜಿಲ್ಲೆಯಲ್ಲಿನ ಟ್ರಾಫಿಕ್ ಪೊಲೀಸ್ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ, ಸಿಬ್ಬಂದಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತರೆ ಆರೋಪಿಗಳು ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಪೋಲಿಸರು ಸೇರಿ ಇತರೆ ಪಾಲುದಾರ ಇಲಾಖೆಗಳು ಒಂದೇ ರೀತಿ ಉಪಚರಿಸಬಾರದೆಂದು ಬಾಲನ್ಯಾಯ ಕಾಯ್ದೆ ಹೇಳುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅವರನ್ನು ಸೂಕ್ಷ್ಮತೆಯಿಂದ ಉಪಚರಿಸಬೇಕು. ಇಲ್ಲವಾದಲ್ಲಿ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಭವಿಷ್ಯ ಹಾಳಾಗಬಹುದು. ವಿಚಾರಣೆ ವೇಳೆ ಮನೆಯ ವಾತಾವರಣ ನೀಡಬೇಕು. ಉತ್ತಮ ಪ್ರಜೆಯಾಗುವ ಅವಕಾಶದ ಬಗ್ಗೆ, ಇತರೆ ಕ್ರಮಗಳ ಕುರಿತು ಅವರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಕಾಯ್ದೆ, ಕಾನೂನುಗಳು ಕಾಲಕಾಲಕ್ಕೆ ಮಾರ್ಪಾಡು, ತಿದ್ದುಪಡಿ, ಸೇರ್ಪಡೆಯಾಗುತ್ತಿರುತ್ತವೆ. ಈ ಕುರಿತು ಕಾನೂನುಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿ, ಸಿಬ್ಬಂದಿ ಈ ಬಗ್ಗೆ ತಿಳಿದು ಅಪ್‌ಡೇಟ್ ಆಗುತ್ತಾ ಹೋದಲ್ಲಿ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು.
ಜಿಲ್ಲೆಯ ಎಲ್ಲ 33 ಠಾಣೆಗಳ ಪೋಲಿಸರು, ಮಕ್ಕಳು ಸೇರಿ ಅಗತ್ಯವಾದ ಎಲ್ಲ ಕಾಯ್ದೆ ಕಾನೂನುಗಳ ಬಗ್ಗೆ ಅಪ್‌ಡೇಟ್ ಆಗಿ ಅದರಂತೆ ನಡೆದುಕೊಳ್ಳಬೇಕು. ಇಂತಹ ತರಬೇತಿ ಕಾರ್ಯಕ್ರಮಗಳು ತಮ್ಮ ವೃತ್ತಿಪರತೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಿದ್ದು, ಇದರ ಸದುಪಯೋಗ ಪಡೆದು ಕಾರ್ಯರೂಪಕ್ಕೆ ತರಬೇಕೆಂದು ಕರೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಕೆ. ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ ಕಾನೂನುಗಳನ್ನು ತಾವು ಮಾತ್ರವಲ್ಲ, ಇಡೀ ಠಾಣೆಯಲ್ಲಿರುವ ಎಲ್ಲ ಸಿಬ್ಬಂದಿಗೆ ತಿಳಿಸಿ ಉತ್ತಮ ತಂಡವಾಗಿ ಕೆಲಸ ಮಾಡಿದಲ್ಲಿ ಬಾಲಾಪರಾಧ ಕಡಿಮೆಯಾಗುತ್ತದೆ. ಮಕ್ಕಳು ಇತ್ತೀಚೆಗೆ ಮೊಬೈಲ್, ಸಮೂಹ ಸಂವಹನಗಳ ಗೀಳಿಗೆ ಒಳಗಾಗಿದ್ದು, ಅವರು ಮಾನಸಿಕ, ಬೌದ್ಧಿಕ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ಬಾಲಾಪರಾಧ ತಡೆಯುವಲ್ಲಿ ಜೆಜೆ ಆಕ್ಟ್, ಸ್ಪೆಷಲ್ ಜುವೆನೈಲ್ ಪೊಲೀಸ್ ಘಟಕ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಡಿಸಿಪಿಓ ಘಟಕಗಳು ನಾಲ್ಕು ಆಧಾರ ಸ್ತಂಭಗಳಂತಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಬಾಲಾಪರಾಧ ತಗ್ಗಿಸಲು ಸಾಧ್ಯ ಎಂದರು.ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರಪ್ಪ ಜಿ.ಎಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಡಿ.ಎಸ್.ಗಾಯಿತ್ರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಮಂಜುನಾಥ, ಪೊಲೀಸ್ ಉಪಾಧೀಕ್ಷಕ ಬಾಬು ಅಂಜನಪ್ಪ, ಸುರೇಶ್ ಮತ್ತಿತರರು ಇದ್ದರು.
ಸಂಘರ್ಷಕ್ಕೊಳಗಾದ ಮಕ್ಕಳಲ್ಲಿ ಶಿಕ್ಷಣದ ಕೊರತೆ: ನ್ಯಾ. ರಾಜಣ್ಣಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಮಾತನಾಡಿ, ಪೋಲಿಸರ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕಾನೂನುಗಳು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಿರುತ್ತವೆ. ಕಾಲಕಾಲಕ್ಕೆ ಹೊಸ ಅಧಿಸೂಚನೆ, ಸುತ್ತೋಲೆ, ತಿದ್ದುಪಡಿಗಳು ಆಗುತ್ತವೆ. ಇವೆಲ್ಲವನ್ನೂ ತಿಳಿದು ಕಾನೂನುಗಳನ್ನು ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಿವೆ ಎಂದರು.ಸಂಘರ್ಷಕ್ಕೆ ಒಳಗಾದ ಮಕ್ಕಳ ಪ್ರಕರಣಗಳಲ್ಲಿ ಮಕ್ಕಳು ಮತ್ತು ಪೋಷಕರಲ್ಲಿ ಶಿಕ್ಷಣದ ಕೊರತೆ ಕಾಣುತ್ತೇವೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣದ ಕೊರತೆ, ಅತಿ ಕಾಳಜಿ ಇತರೆ ಕಾರಣಗಳಿಂದ ಸಂಘರ್ಷಕ್ಕೊಳಗಾದ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವವರು ಇರುತ್ತಾರೆ. ತಳಮಟ್ಟದಲ್ಲಿ ಕೆಲಸ ಮಾಡುವ ಪೋಲೀಸರಿಗೆ ಇದೆಲ್ಲ ತಿಳಿದಿರುತ್ತದೆ. ಆದ್ದರಿಂದ ನೀವು ಶಿಕ್ಷಣದ ಮಹತ್ವ, ಅರಿವು ಜೊತೆಗೆ ಅವರಿಗೆ ಆಪ್ತಸಮಾಲೋಚನೆ ನೀಡುವ ಮೂಲಕ ಬಾಲಾಪರಾಧವನ್ನು ತಡೆಯುವಲ್ಲಿ ಪ್ರಯತ್ನ ಮಾಡಬೇಕು ಎಂದರು.