ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬರ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದ್ದು, ನೀರು- ಮೇವು ಪೂರೈಕೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಜನರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆ ಬಾವಿಗಳ ಬಾಡಿಕೆ ಆಧಾರದಲ್ಲಿ ಪಡೆದು, ನೀರು ಪೂರೈಸಲಾಗುತ್ತಿದೆ. ಎಲ್ಲೆಲ್ಲಿ ಫ್ಲೋರೈಡ್ ಯುಕ್ತ ನೀರಿದೆ ಅಂತಹ ಕಡೆ ಉತ್ತಮ ನೀರು ಪೂರೈಸಲು ಟ್ಯಾಂಕರ್ ಬಳಸಬೇಕು. ಶುದ್ಧ ನೀರಿನ ಘಟಕ ಸುಸ್ಥಿತಿಯಲ್ಲಿಡಬೇಕು ಎಂದು ತಿಳಿಸಿದರು.
ಸೂಳೆಕೆರೆಗೆ ನೀರು ತುಂಬಿಸಿ:ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಮಾತನಾಡಿ, ಜಿಲ್ಲೆಯ ಬಹುಗ್ರಾಮದ ಯೋಜನೆ ಮತ್ತು ಚಿತ್ರದುರ್ಗಕ್ಕೆ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಸುತ್ತಿದ್ದು, ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದೆ. ಭದ್ರಾ ನಾಲೆಯಿಂದ ಸೂಳೆಕೆರೆಗೆ ನೀರು ತುಂಬಿಸಬೇಕು. ಅಲ್ಲದೇ, ನೀರು ಪೂರೈಸಲು ಟ್ಯಾಂಕ್‌ಗೆ ಅನುಮತಿ ನೀಡಿದ್ದು, ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದರಿಂದ ಬಾಡಿಗೆಗೆ ಟ್ಯಾಂಕರ್ ಸಿಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ರೈತರಿಗೆ ಆದ್ಯತೆ ನೀಡಿ:ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿ, ಸೂಳೆಕೆರೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೂ ನೀರು ಕೊಡಬೇಕು. ಬೆಳೆದ ತೋಟಗಾರಿಕೆ ಬೆಳೆಗಳನ್ನೂ ಉಳಿಸಬೇಕಾಗಿದೆ. ಇದಕ್ಕಾಗಿ ಮುಂದಿನ 2 ಹಂತದಲ್ಲಿ ನೀರು ಬಿಡುಗಡೆ ಮಾಡುವ ವೇಳೆ ಕೊನೆ ಭಾಗದ ರೈತರಿಗೆ ಆದ್ಯತೆಯಾಗಿ ನೀರು ಕೊಡಬೇಕು. ನೀರು ಕೊಡಲು ಎಲ್ಲಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಾಡಿಗೆಗೆ ಪಡೆಯುವಂತಹ ಟ್ಯಾಂಕರ್ ಗಳಿಗೆ ಜಿಪಿಎಸ್ ಅಳಡಿಸಬೇಕಾಗುತ್ತದೆ ಎಂದು ಹೇಳಿದರು.
ಕಡಿಮೆ ಆಹಾರ ಧಾನ್ಯ ವಿತರಿಸಿದರೆ ಕ್ರಮ:ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ನ್ಯಾಯಬೆಲೆ ಅಂಗಡಿಗಳ ಪೈಕಿ ಕೆಲ ಕಡೆ 1 ಕೆಜಿವರೆಗೆ ಅಕ್ಕಿ ಕಡಿಮೆ ತೂಕ ಮಾಡಿ, ಕೊಡುತ್ತಿರುವ ದೂರು ಇವೆ ಎಂದು ಸಚಿವರ ಗಮನಕ್ಕೆ ತಂದರು. ಅದಕ್ಕೆ ಮಲ್ಲಿಕಾರ್ಜುನ, ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಹಾರ ಧಾನ್ಯ ವಿತರಿಸುತ್ತಿದ್ದಲ್ಲಿ ಅಂತಹ ನ್ಯಾಯ ಬೆಲೆ ಅಂಗಡಿಗಳ ಮೇಲೆ ಕ್ರಮಕೈಗೊಳ್ಳಲು ಡಿಸಿಗೆ ಆದೇಶಿಸಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕೆಲವು ಕಡೆ ಕೆರೆ ಒತ್ತುವರಿ, ಸ್ಮಶಾನ ಒತ್ತುವರಿ ಮಾಡಲಾಗಿದೆ ಎಂದು ದೂರಿದರು. ಆಗ ಸಚಿವರು, ಸರ್ಕಾರಿ ಜಾಗ ಗುರುತಿಸಿ, ಒತ್ತುವರಿ ಮಾಡದಂತೆ ಬೀಟ್ ವ್ಯವಸ್ಥೆ ಮಾಡಲಾಗುವುದು. ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ. ಶಾಲೆಗಳಿಗೆ ಕೊಠಡಿಗಳ ಸಮಸ್ಯೆ ಇದ್ದು, ಪಾಳು ಬಿದ್ದ ಕೊಠಡಿಗಳನ್ನು ಸಂಪೂರ್ಣ ತೆರವು ಮಾಡಬೇಕು. ಪ್ರತಿ ಶಾಲೆಯಲ್ಲಿ ಶೌಚಾಲಯ, ಆಟದ ಮೈದಾನ, ಕುಡಿಯುವ ನೀರು, ಒಂದೇ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಒಂದೇ ಏಜೆನ್ಸಿಗೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಸಮಸ್ಯೆ ಇತ್ಯರ್ಥಕ್ಕೆ ಕ್ರಮ
ಗ್ಯಾರಂಟಿ ಯೋಜನೆ ಸಮೀಕ್ಷೆ ನಡೆಸುತ್ತಿದ್ದು, ಯಾರಿಗೆ ಇವು ತಲುಪುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಿ, ಪರಿಹರಿಸುವ ಕೆಲಸ ಮಾಡಲಾಗುತ್ತದೆ. ಗೃಹಲಕ್ಷ್ಮಿಯಡಿ ಕೆಲ ತಾಂತ್ರಿಕ ಸಮಸ್ಯೆಯಿಂದ ಮೊದಲ 2 ತಿಂಗಳು 2 ಸಾವಿರ ಬಂದವರಿಗೆ ನಂತರದ ತಿಂಗಳಲ್ಲಿ ಬಂದಿಲ್ಲ. ಆಧಾರ್ ಜೋಡಣೆ, ಬ್ಯಾಂಕ್ ಕೆವೈಸಿಗೆ ಸಂಬಂಧಿಸಿದ ಸಮಸ್ಯೆಗಳ ಜಿಲ್ಲಾಧಿಕಾರಿಗಳು ತಾಂತ್ರಿಕ ಪರಿಣಿತರೊಂದಿಗೆ ಅಭಿಯಾನದ ರೀತಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು.ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ