ಸಾರಾಂಶ
ಔರಾದ್‌ನ ಸಂತಪೂರದಲ್ಲಿರುವ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರಿಗೆ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಔರಾದ್
ಆಧುನಿಕತೆಯಲ್ಲಿಯೂ ಗುರು ಶಿಷ್ಯರ ಪವಿತ್ರ ಸಂಬಂಧವನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿದ ಸಂತಪೂರ ಸುಭಾಶ ಚಂದ್ರ ಬೋಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲೆಗೆ ಮಾದರಿ ಹಾಗೂ ಅನುಕರಣೀಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಅಭಿಪ್ರಾಯಪಟ್ಟರು.ತಾಲೂಕಿನ ಸಂತಪೂರ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲಾ ಆವರಣದಲ್ಲಿ ಹಳೆ ವಿದ್ಯಾರ್ಥಿಗಳಿಂದ ನಡೆದ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಪಾಠ ಎಂದರೆ ಪುಣ್ಯ ಸಂಪಾದನೆಯ ಕಾರ್ಯ ಎಂದ ಅವರು, ದೇಶದ ಮೂಲೆ, ಮೂಲೆಗೂ ಇಲ್ಲಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸಿ ದೇಶದ ಅಭಿವೃದ್ಧಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ.
ಈ ಶಾಲೆಯ ಶಿಕ್ಷಕರು ನೀಡಿರುವ ನೈತಿಕ ಹಾಗೂ ಸಂಸ್ಕಾರ ತುಂಬಿದ ಶಿಕ್ಷಣ ಇಂತಹ ಮೌಲ್ಯಯುತ ಕಾರ್ಯಕ್ರಮ ಮಾಡಲು ಸಾಕ್ಷಿಯಾಗಿ ನಿಂತಿದೆ ಎಂದರೆ ತಪ್ಪಾಗದು ಎಂದರು.ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ತನ್ನ ವಿಶಿಷ್ಟ ಪ್ರತಿಭೆ ತೋರಿದ ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ತರುವಂತಹ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರ್ಶ ಶಾಲೆಗೆ ಸಾಕ್ಷಿಯಾದ ಈ ಶಾಲೆಯು ಗುರುಪಂಪರೆಗೆ ಹೊಸ ಭಾಷ್ಯ ಬರೆದಿದ್ದಾರೆ ಎಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಖಾಜಾ ಖಲಿಲುಲ್ಲ ಮಾತನಾಡಿದರು. ಪೂಜ್ಯ ಝಾಪಾ ಮಹಾರಾಜರು, ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ ಬೋರಾಳೆ, ಶಾಲೆಯ ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಹಿಪ್ಪಳಗಾವೆ, ಶಿವರಾಜ ಜುಲಾಂಡೆ, ಮನೋಹರ ಬಿರಾದಾರ, ಗುರುನಾಥ ದೇಶಮುಖ, ಸಂತೋಷ ಪಾಟೀಲ್, ರತಿಕಾಂತ ಜೋಜನಾ, ಗಫಾರಖಾನ್, ಮಂಜುನಾಥ ಸ್ವಾಮಿ, ರಾಜಕುಮಾರ ತಂಬಾಕೆ, ನಾಗೇಶ ಸ್ವಾಮಿ ಮಸ್ಕಲ್, ಡಾ. ನಾಗೇಶ ಬರ್ಗೆನ, ಶರಣಬಸಪ್ಪ ಪಾಟೀಲ್, ವಿರೇಶ ಮಸ್ಕಲ್, ಧನರಾಜ ಬಿರಾದಾರ್, ಗುಂಡಪ್ಪ ವಲ್ಲೂರೆ, ವಿಜಯಕುಮಾರ್, ನಂದಾದೀಪ ಬೋರಾಳೆ, ಬಸವಣಪ್ಪ ಸ್ವಾಮಿ, ಸೂರ್ಯಕಾಂತ ಸಿಂಗೆ ಸೇರಿದಂತೆ ಇನ್ನಿತರರಿದ್ದರು.ನಾಗೇಶ ಸ್ವಾಮಿ ಸಂಪಾದಕತ್ವದಲ್ಲಿ ಶಾಲೆಯ ಸವಿ ನೆನಪಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಜುಕುಮಾರ ಯನಗುಂದಾ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಶಿಕ್ಷಕರಿಗೆ ಸಾರೋಟದಲ್ಲಿ ಸಂತಪೂರ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.