ಶಿಗ್ಗಾಂವಿ: ಕಾರ್ಮಿಕರ ಮಕ್ಕಳು ಸಹಿತ ಮುಖ್ಯವಾಹಿನಿಗೆ ಬಂದು ವೈದ್ಯರು, ಎಂಜಿನಿಯರ್ ಸೇರಿದಂತೆ ಉನ್ನತ ಅಧಿಕಾರಿಗಳಾಗಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ನಿರ್ಮಾಣ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಕಾರ್ಮಿಕರಿಗೆ ಪ್ರಮಾಣ ಪತ್ರ ಹಾಗೂ ಕಿಟ್ ವಿತರಿಸಿ ಮಾತನಾಡಿದ ಅವರು, ಕಾರ್ಮಿಕರ ಮೇಲೆ ಅವನ ಇಡೀ ಕುಟುಂಬ ಅವಲಂಬನೆ ಆಗಿರುತ್ತದೆ. ಆದ್ದರಿಂದ ಕಾರ್ಮಿಕರಿಗೆ ಯಾವುದೇ ತೊಂದರೆ ಆಗಬಾರದು. ಆದ್ದರಿಂದ ಕಾರ್ಮಿಕರಿಗೆ ಗೌರವ ಕೊಡುವ ವ್ಯವಸ್ಥೆ ನಮ್ಮದಾಗಬೇಕು ಎಂದರು.೩೧ ಕೋಟಿ ವೆಚ್ಚದಲ್ಲಿ ಬಂಕಾಪುರ ಗುಡ್ಡದ ಹತ್ತಿರ ಉನ್ನತ ಮಟ್ಟದ ಕಾರ್ಮಿಕರ ಮಕ್ಕಳಿಗೆ ಶಾಲೆಯನ್ನು ಪ್ರಾರಂಭ ಮಾಡುತ್ತಿದ್ದು, ಅದರ ಸದುಪಯೋಗ ಕಾರ್ಮಿಕರು ಪಡೆದುಕೊಳ್ಳಲಿ. ಅರ್ಹ ಕಾರ್ಮಿಕನಿಗೆ ಕಾರ್ಮಿಕ ಕಾರ್ಡ್ ಸಿಗಬೇಕು. ಅಧಿಕಾರಿಗಳು ಹಣವನ್ನು ಪಡೆಯಬಾರದು ಎಂದು ತಾಕೀತು ಮಾಡಿದರು. ಕ್ಷೇತ್ರದಲ್ಲಿ ೮ ಸಾವಿರ ಹಕ್ಕುಪತ್ರ ನೀಡಿದ್ದೇವೆ, ಅವರೆಲ್ಲರೂ ಕಾರ್ಮಿಕ ವರ್ಗದವರು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕರಣಂ ಬೆಂಗಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಡು ಬಡವ ಸ್ಥಾನದಿಂದ ಉನ್ನತ ಮಟ್ಟಕ್ಕೇರುವ ಇಲಾಖೆ ಕಾರ್ಮಿಕ ಇಲಾಖೆ ಅಲ್ಲದೇ ಮದುವೆ, ಶೈಕ್ಷಣಿಕ, ವೈದ್ಯಕೀಯ, ಮರಣ ಧನಸಹಾಯ ಸೇರಿದಂತೆ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ಆರೋಗ್ಯ ತಪಾಸಣೆ ಜೊತೆಗೆ ಚಿಕಿತ್ಸೆ ನೀಡುವು ಮುಖ್ಯ ಉದ್ದೇಶ ಹೊಂದಿದೆ ಎಂದರು.ಗುಡ್ಡಪ್ಪ ಜಲದಿ, ಮಂಜುನಾಥ ಮಸಳಿ, ಮಹ್ಮದಸಾಬ ಕಾಲೇಭಾಗ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಚಂದ್ರು ಕೊಡ್ಲಿವಾಡ, ಅಶೋಕ ಓಲೇಕಾರ, ಮಹಾಂತೇಶ ಸಾಲಿ, ಅಣ್ಣಪ್ಪ ಲಮಾಣಿ, ಬಾಬರ ಬಾವೋಜಿ, ಮಂಜುನಾಥ ತಿಮ್ಮಾಪೂರ ಸೇರಿದಂತೆ ಕಾರ್ಮಿಕ ಮುಖಂಡರು, ಫಲಾನುಭವಿಗಳು ಉಪಸ್ಥಿತರಿದ್ದರು.