ಶಾಲೆಗಳಲ್ಲೀಗ ಮಕ್ಕಳ ಕಲರವ

| Published : May 29 2024, 12:48 AM IST

ಸಾರಾಂಶ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಮೇ.29 ರಿಂದ ಸರ್ಕಾರಿ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಿ ಬರಲಿದೆ. ಬೇಸಿಗೆ ರಜೆಯ ಮೂಡ್‌ನಲ್ಲಿದ್ದ ಮಕ್ಕಳು ಶಾಲೆಯ ಅಂಗಳದತ್ತ ಹೆಜ್ಜೆ ಹಾಕಲು ಕಾತರರಾಗಿದ್ದಾರೆ. ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಮೇ.29 ರಿಂದ ಸರ್ಕಾರಿ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಿ ಬರಲಿದೆ. ಬೇಸಿಗೆ ರಜೆಯ ಮೂಡ್‌ನಲ್ಲಿದ್ದ ಮಕ್ಕಳು ಶಾಲೆಯ ಅಂಗಳದತ್ತ ಹೆಜ್ಜೆ ಹಾಕಲು ಕಾತರರಾಗಿದ್ದಾರೆ. ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.ರಜಾ ದಿನಗಳ ಬಳಿಕ ಶಾಲೆಗಳತ್ತ ಹೆಜ್ಜೆ ಹಾಕುವ ಮಕ್ಕಳಿಗೆ ಸಿಹಿ ನೀಡಿ ಶಾಲೆಗಳಿಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಶಾಲೆ ಆರಂಭದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ಶೇ.56.36 ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ತಾಲೂಕು ಉಗ್ರಾಣದಲ್ಲಿವೆ. ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ (ಖಾಸಗಿ) ಸೇರಿದಂತೆ ಒಟ್ಟು 402 ಶಾಲೆಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಸಲಾಗಿದೆ. ಸ್ಥಳೀಯ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರು ಜೊತೆಗೂಡಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡುವಂತೆ ಸೂಚಿಸಲಾಗಿದೆ.ಇನ್ನು 53,638 ಮಧ್ಯಾಹ್ನದ ಬಿಸಿಯೂಟ ವಿತರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪ್ರತಿ ಬಾರಿ ಪಠ್ಯಪುಸ್ತಕ, ಸಮವಸ್ತ್ರ ವಿಳಂಬವಾಗುತ್ತಿತ್ತು. ಶಾಲೆ ಆರಂಭದ ಮುನ್ನ ಪುಸ್ತಕ, ಸಮವಸ್ತ್ರ ಮಕ್ಕಳಿಗೆ ಸೇರುತ್ತಿರುವುದು ಪಾಲಕರಲ್ಲಿ ನೆಮ್ಮದಿ ಮೂಡಿಸಿದೆ. ಬಡ ಕುಟುಂಬಗಳಿಗೆ ಸರ್ಕಾರಿ ಶಾಲೆಗಳು ಆಶಾಕಿರಣವಾಗಿ ಕಾಣಿಸಿವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜೂನ್ ತಿಂಗಳಂತ್ಯದವರೆಗೆ ಹಿಂದಿನ ತರಗತಿಗಳ ವಿಷಯಗಳನ್ನು ಮಕ್ಕಳಿಗೆ ಪುನರಾವರ್ತನೆ ಮಾಡಲಾಗುವುದು. 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್ ತಿಂಗಳಲ್ಲಿ ಕಲಿಕಾ ಆಂದೋಲನ ನಡೆಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷವಾಗಿ ಗಮನ ನೀಡಲು ಪರಿಹಾರ ಬೋಧನೆ ಆರಂಭಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

ಶಾಲೆಯ ಕಟ್ಟಡದ ಸ್ಥಿತಿಗತಿ, ದುರಸ್ತಿ ಕಾರ್ಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಕ್ರಮ ವಹಿಸಿದೆ.ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ:

ತಾಲೂಕಿನ ಕೆಲ ಖಾಸಗಿ ಶಾಲೆಗಳು ಈಗಾಗಲೇ ಶುರುವಾಗಿವೆ. ಪ್ರವೇಶ ಪ್ರಕ್ರಿಯೆ ಮತ್ತು ಬೋಧನಾ ಪ್ರಕ್ರಿಯೆಗಳನ್ನು ಆರಂಭಿಸಿವೆ. ಈ ಬಾರಿ ಖಾಸಗಿ ಶಾಲೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು ಪ್ರವೇಶಕ್ಕಾಗಿ ಪೈಪೋಟಿ ಆರಂಭಗೊಂಡಿದೆ. ತಾಲೂಕಿನಲ್ಲಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಹಚ್ಚುವ ಕಾರ್ಯದತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನ ಹರಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ಡೋನೆಷನ್ ಮೀತಿ ಮೀರಿದ್ದು ಜಿಲ್ಲಾಡಳಿತ ಜಾಣ ಮೌನ ವಹಿಸದೇ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹ.

ಮೇ.29 ರಂದು ಶಾಲೆಗಳ ಪುನಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಮುಖ್ಯ ಶಿಕ್ಷಕರು, ಶಿಕ್ಷಕರು ಮಕ್ಕಳನ್ನು ಹೂಗುಚ್ಚ ನೀಡಿ ಸ್ವಾಗತಿಸಿಕೊಳ್ಳುವರು. ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸುವಂತೆ ಸೂಚಿಸಲಾಗಿದೆ.

-ಪ್ರಭಾವತಿ ಪಾಟೀಲ,

ಬಿಇಒ.ಬಿಸಿಯೂಟ ವಿತರಣೆಯಲ್ಲಿ ಸ್ವಚ್ಛತೆ ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು. ಮೇ.31 ರಂದು ಸಿಹಿ ಊಟ ವಿತರಿಸಲಾಗುವುದು. ಆಹಾರ, ನೀರು ಪರೀಕ್ಷಿಸಲಾಗುವುದು. ಅಡುಗೆ ಸಿಬ್ಬಂದಿಯ ವೈದ್ಯಕೀಯ ಪ್ರಮಾಣ ಪತ್ರ ಪರಿಶೀಲಿಸಲಾಗುವುದು. ಬಿಸಿಯೂಟ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಲು ಕ್ರಮ ವಹಿಸಿದೆ.

-ಸವಿತಾ ಹಲಕಿ,
ಬಿಸಿಯೂಟ ಯೋಜನೆ ಸಹಾಯಕಿ ನಿರ್ದೇಶಕಿ.