ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದರಿಂದ ಮಕ್ಕಳ ಆತ್ಮವಿಶ್ವಾಸ ಕುಗ್ಗಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಮಿಮ್ಸ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲೇ ನೀಟ್ ಪರೀಕ್ಷೆ ನಡೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮೇಲೆ ಅವರಿವರನ್ನು ದೂರುವ ಬದಲು ಮೊದಲೇ ನಿಯಂತ್ರಣ ಮಾಡಬೇಕಿತ್ತು. ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಎಲ್ಲಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಗಲು-ರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದ ಮಕ್ಕಳಿಗೆ ಈ ರೀತಿ ಆಗಬಾರದಿತ್ತು. ಪರೀಕ್ಷೆ ರದ್ದುಗೊಳಿಸಿರುವುದರಿಂದ ಅವರ ಆತ್ಮಸ್ಥೈರ್ಯ ಮತ್ತಷ್ಟು ಕುಗ್ಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಿದರೂ ಸೋರಿಕೆಯಾಗಿದೆ ಎಂದರೆ ಖದೀಮರು ಎಷ್ಟು ಬುದ್ಧಿವಂತರಿದ್ದಾರೆ. ಅವರೆಲ್ಲರನ್ನೂ ಕಾನೂನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ಮೋದಿ ಅವರು ನೀಡಿರುವ ಸಲಹೆಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದಾರೆ ಅನ್ನೋ ಮಾಹಿತಿ ಇದೆ. ಅದು ಎಷ್ಟರ ಮಟ್ಟಿಗೆ ಸರಿ-ತಪ್ಪು ಎನ್ನುವುದು ಗೊತ್ತಿಲ್ಲ. ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಎಲ್ಲವನ್ನೂ ಜನರ ಮೆಲೆ ಹಾಕುವುದು ಸರಿಯಲ್ಲ ಎಂದು ನುಡಿದರು.
ಯುದ್ಧ ಸಂಕಷ್ಟ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡಬೇಕು. ಅದಕ್ಕಾಗಿ ಪರಿಸ್ಥಿತಿಯನ್ನು ಜನರ ಮೇಲೆ ಹಾಕುವುದು ಸರಿಯಲ್ಲ. ಪ್ರಧಾನಿ ಹೇಳಿದ್ದಾರೆ ಅಂತ ಕೆಲವರು ಖುಷಿ ಪಟ್ಟರೆ, ಮತ್ತೆ ಕೆಲವರು ವಿರೋಧ ಮಾಡ್ತಾರೆ ಅಷ್ಟೇ ಎಂದರು.
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಸ್ವತಂತ್ರವಾಗಿ ಬಿಟ್ಟುಬಿಡೋಣ. ಎಲ್ಲಿ ಕೈಗಾರಿಕೆಯನ್ನು ತರುತ್ತಾರೆ. ಯಾವ ಊರಲ್ಲಿ ಸ್ಥಾಪನೆ ಮಾಡಿ ಎಷ್ಟು ಉದ್ಯೋಗ ಸೃಷ್ಟಿಸುವರೋ ನೋಡೋಣ. ಅದನ್ನು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ ಎಂದು ನೇರವಾಗಿ ಹೇಳಿದರು.
ಶಾಸಕ ಪಿ.ರವಿಕುಮಾರ್ ಹಾಜರಿದ್ದರು.