ನಾಳೆಯಿಂದ ಮಕ್ಕಳ ದಸರಾ: ವಿವಿಧ ಕಾರ್ಯಕ್ರಮ- ರೇಖಾ
KannadaprabhaNewsNetwork | Published : Oct 15 2023, 12:45 AM IST
ನಾಳೆಯಿಂದ ಮಕ್ಕಳ ದಸರಾ: ವಿವಿಧ ಕಾರ್ಯಕ್ರಮ- ರೇಖಾ
ಸಾರಾಂಶ
16ರಂದು ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಕರಾಟೆ ಪಂದ್ಯಾವಳಿ- 17ರಂದು 6ರಿಂದ 16 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಕುಡೊ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ವತಿಯಿಂದ ಅ.16ರಿಂದ 18ರವರೆಗೆ ವಿವಿಧ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.16ರಂದು ಬೆಳಗ್ಗೆ 10 ಗಂಟೆಗೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಕರಾಟೆ ಪಂದ್ಯಾವಳಿಗಳು, ರಾಜ್ಯ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎಂ. ಅಲ್ತಾಫ್ ಪಾಶಾ, ಜಿಲ್ಲಾ ಸೀನಿಯರ್ ಕರಾಟೆ ಮಾಸ್ಟರ್ ಸುರೇಂದ್ರ ಶಾಸ್ತ್ರಿ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಅ.17ರಂದು ಬೆಳಿಗ್ಗೆ 10.30ಕ್ಕೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 6ರಿಂದ 16 ವರ್ಷ ವಯಸ್ಸಿನ ಮಕ್ಕಳ ರಾಜ್ಯ ಮಟ್ಟದ ಕುಡೊ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿ ಆಯೋಜಿಸಿದ್ದು, ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಕುಡೊ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು. ಅ.18ರಂದು ಸಂಜೆ 6.30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಮಕ್ಕಳ ದಸರಾ ಸಮಾರೋಪ ಸಮಾರಂಭವನ್ನು ಶಿವಮೊಗ್ಗದ ಜ್ಯೂನಿಯರ್ ಡ್ರಾಮಾ ಸೀಸನ್-4ರ ವಿಜೇತೆ ಎಸ್.ರಿಧಿ, ಸರಿಗಮಪ ಸೀಸನ್-14ರ ಹಿನ್ನೆಲೆ ಗಾಯಕಿ ಆರ್.ನೇಹಾ, ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ, ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್ ಹಾಗೂ ಇನ್ನಿತರರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿವಮೊಗ್ಗದ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು. ಅನಂತರ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕೊಡಗಿನ ಮ್ಯಾಜಿಕ್ ಸ್ಟಾರ್ ವಿಕ್ರಂ ಶೆಟ್ಟಿ ಅವರಿಂದ ಮ್ಯಾಜಿಕ್ ಶೋ, ಹೆಣ್ಣುಮಕ್ಕಳಿಂದ ಕರಾಟೆ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ನಡೆಯಲಿದೆ. ಹಾಗೂ ಕ್ರೀಡಾ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸಮಿತಿಯ ಸದಸ್ಯರಾದ ಆಶಾ ಚಂದ್ರಪ್ಪ, ಆರ್.ಸಿ. ನಾಯಕ್, ಮಂಜುಳಾ ಶಿವಣ್ಣ, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್ ಇನ್ನಿತರರು ಉಪಸ್ಥಿತರಿದ್ದರು.