ಸಾರಾಂಶ
ಗಣರಾಜ್ಯೋತ್ಸವ ಹಾಗೂ ದೇವರ ವಾಕ್ಯದ ಭಾನುವಾರ ಆಚರಣೆಯ ಪ್ರಯುಕ್ತ ಇಲ್ಲಿನ ತೊಟ್ಟಂನ ಸಂತ ಅನ್ನಮ್ಮ ಚರ್ಚ್‌ನ ಮಿಶನರಿ ಮಕ್ಕಳ ಸೊಸೈಟಿ ವತಿಯಿಂದ ಬಡ ಮಕ್ಕಳ ಸಹಾಯಾರ್ಥವಾಗಿ ಮಕ್ಕಳ ನೇತೃತ್ವದಲ್ಲಿಯೇ ಬೃಹತ್ ಆಹಾರ ಮೇಳ ಸಾರ್ವಜನಿಕರ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಮಲ್ಪೆ
ಗಣರಾಜ್ಯೋತ್ಸವ ಹಾಗೂ ದೇವರ ವಾಕ್ಯದ ಭಾನುವಾರ ಆಚರಣೆಯ ಪ್ರಯುಕ್ತ ಇಲ್ಲಿನ ತೊಟ್ಟಂನ ಸಂತ ಅನ್ನಮ್ಮ ಚರ್ಚ್‌ನ ಮಿಶನರಿ ಮಕ್ಕಳ ಸೊಸೈಟಿ ವತಿಯಿಂದ ಬಡ ಮಕ್ಕಳ ಸಹಾಯಾರ್ಥವಾಗಿ ಮಕ್ಕಳ ನೇತೃತ್ವದಲ್ಲಿಯೇ ಬೃಹತ್ ಆಹಾರ ಮೇಳ ಸಾರ್ವಜನಿಕರ ಗಮನ ಸೆಳೆಯಿತು.ಮೇಳಕ್ಕೆ ಚಾಲನೆ ನೀಡಿದ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ, ಚರ್ಚಿನ ಪುಟ್ಟ ಮಕ್ಕಳು ತಾವೇ ಮುತುವರ್ಜಿ ವಹಿಸಿ ಬಡ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಆಹಾರ ಮೇಳವನ್ನು ಆಯೋಜಿಸಿದ್ದಾರೆ. 3ನೇ ತರಗತಿಯಿಂದ 10 ನೇ ತರಗತಿವರೆಗಿನ ಮಕ್ಕಳು ತಾವೇ ತಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದ ತಿಂಡಿ ತಿನಿಸುಗಳನ್ನು ಇಲ್ಲಿ ಮಾರಾಟ ಮಾಡಿ ಅದರಿಂದ ಜಮೆಯಾದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುವ ಸದುದ್ದೇಶವನ್ನು ಇಟ್ಟುಕೊಂಡಿರುವುದು ಶ್ಲಾಘನಾರ್ಹ ಸಂಗತಿಯಾಗಿದೆ ಎಂದರು.ಅಂಗಡಿಗಳ ಮಾದರಿಯಲ್ಲಿ ಕೌಂಟರ್ ಗಳನ್ನು ನಿರ್ಮಿಸಿ ಅವುಗಳಲ್ಲಿ ಮಕ್ಕಳೇ ಉತ್ಸಾಹದಿಂದ ತಾವು ತಯಾರಿಸಿರುವ ವಿವಿಧ ಬಗೆಯ ಖಾದ್ಯಗಳನ್ನು ಮಾರಾಟ ಮಾಡುವುದು ಕಂಡಬಂತು. ಚರ್ಚಿನ ಸುಮಾರು 50ಕ್ಕೂ ಮಕ್ಕಳು ತಮ್ಮ ಪಾಲಕರ ನೆರವಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಮಾಡಿಸಿಕೊಂಡು ಬಂದಿದ್ದರು. ಚರ್ಚಿನ ಭಕ್ತಾದಿಗಳು, ಪೋಷಕರು ಹಾಗೂ ಸಹಪಾಠಿಗಳು ಹಣವನ್ನು ನೀಡುವ ಮೂಲಕ ಖಾದ್ಯಗಳ ರುಚಿಯನ್ನು ಸವಿದರು.ಮಕ್ಕಳು ತಮ್ಮ ಮನೆಗಳಿಂದ ಮಾಡಿಸಿಕೊಂಡು ಬಂದಿದ್ದ ತಿಂಡಿತಿನಿಸುಗಳನ್ನು ಒಪ್ಪ, ಓರಣವಾಗಿ ತಮಗಾಗಿ ನಿಗದಿ ಮಾಡಿದ್ದ ಸ್ಥಳದಲ್ಲಿ ಜೋಡಿಸಿದ್ದರು. ಅಲ್ಲಿ ಸ್ವಚ್ಛತೆಗೆ ಆದ್ಯತೆ ಇತ್ತು. ಸುಮ್ಮನೆ ನೋಡಲು ಬಂದವರೂ ಮಕ್ಕಳ ಉದ್ದೇಶವನ್ನು ಕಂಡು ತಿನಿಸುಗಳನ್ನು ಖರೀದಿ ಮಾಡುವಷ್ಟರ ಮಟ್ಟಿಗೆ ಮಕ್ಕಳು ಗ್ರಾಹಕರನ್ನು ಆಕರ್ಷಿಸಿದರು. ಹತ್ತಾರು ಬಗೆ ತಿನಿಸುಗಳು ನೋಡುಗರ ಬಾಯಲ್ಲಿ ನೀರೂರಿಸಿದವು. ಮಕ್ಕಳ ಉತ್ಸಾಹವಂತೂ ಮಾರುಕಟ್ಟೆಯ ವಾತಾವರಣ ಇಮ್ಮಡಿಗೊಳಿಸಿತ್ತು.ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫೆರ್ನಾಂಡಿಸ್, ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು, ಚರ್ಚಿನ ಭಕ್ತವೃಂದ ಉಪಸ್ಥಿತರಿದ್ದರು.