ಮಕ್ಕಳಿಗೆ ಉತ್ತಮವಾದ ಆಹಾರ ಮತ್ತು ಕ್ರೀಡೆ ಬಹಳ ಮುಖ್ಯ. ಹಾಗಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಮಕ್ಕಳು ನಿರಂತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕ್ರಿಯಾಶೀಲವಾಗಿರಲು ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳು ದೇಶದ ಸಂಪತ್ತು, ಸದೃಢ ಸಮಾಜ ನಿರ್ಮಾಣಕ್ಕೆ ಮಕ್ಕಳ ಆರೋಗ್ಯ ಬಹಳ ಮುಖ್ಯ ಎಂದು ಬೆಳಗಾವಿ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬೇಬಿಗ್ರಾಮದ ಶ್ರೀದುರ್ದುಂಡೇಶ್ವರ ಮಠದ ಡಿಎಂಎಸ್ ಜ್ಞಾನಕುಟೀರ ಹಿಪ್ಪೋಕ್ಯಾಂಪಸ್ ಶಾಲೆಯಲ್ಲಿ ಮಹಾಚೇತ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿಗಳ 132ನೇ ಜಯಂತಿ ಅಂಗವಾಗಿ ನಡೆದ ಶಾಲಾ ಮಕ್ಕಳ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಉತ್ತಮವಾದ ಆಹಾರ ಮತ್ತು ಕ್ರೀಡೆ ಬಹಳ ಮುಖ್ಯ. ಹಾಗಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಮಕ್ಕಳು ನಿರಂತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಕ್ರಿಯಾಶೀಲವಾಗಿರಲು ಸಾಧ್ಯವಾಗಲಿದೆ ಎಂದರು.

ಮರೀದೇವರು ಸ್ವಾಮೀಜಿ ಈ ಭಾಗದಲ್ಲಿ ಆದರ್ಶವಾದ ಬದುಕು ನಡೆಸಿದ ಮಹಾನ್ ಚೇತನ. ಮತ್ತೊಬ್ಬರಿಗೆ ಪ್ರೇರಣೆಯಾಗುವ ರೀತಿ ಬದುಕಿದ್ದರು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪೂಜ್ಯರ ಜಯಂತ್ಯುತ್ಸವಗಳು ನಡೆಯಲಿ ಎಂದು ಆಶಿಸಿದರು.

ಮಠದ ಪೀಠಾಧ್ಯಕ್ಷ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಡಿಎಂಎಸ್ ಶಾಲೆಯು ಮಕ್ಕಳನ್ನು ದೇಶದ ಬಹುದೊಡ್ಡ ಆಸ್ತಿಯನ್ನಾಗಿ ಮಾಡಬೇಕು ಎಂಬ ಕನಸ್ಸು ಹೊತ್ತುಕೊಂಡು ಮಕ್ಕಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆ ನಡೆಸುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎ.ಲೋಕೇಶ್ ಮಾತನಾಡಿ, ಮಕ್ಕಳು ಆರೋಗ್ಯ ಮತ್ತು ಕ್ರೀಡೆ ಎರಡನ್ನೂ ಜತೆಯಾಗಿ ತೆಗೆದುಕೊಂಡು ಹೋಗಬೇಕು, ಸದೃಢವಾದ ಆರೋಗ್ಯ ಇರುವ ಕಡೆ ಒಳ್ಳೆಯ ಮನಸ್ಸು ಇರುತ್ತದೆ. ಇದಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಮಕ್ಕಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಜತೆಗೆ ಏಕಾಗ್ರತೆ ಹೆಚ್ಚುತ್ತದೆ. ಏಕಾಗ್ರತೆ ಇರುವ ಕಡೆ ಕಲಿಕೆಗೆ ನೆರವಾಗುತ್ತದೆ. ಹಾಗಾಗಿ ಶಾಲಾ ಹಂತದಲ್ಲಿ ನಡೆಯುವ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ನುಡಿದರು.

ಮಕ್ಕಳಿಗೆ ಹಲವಾರು ಕ್ರೀಡಾಕೂಟಗಳು ನಡೆದವು, ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರವಿಕುಮಾರ್, ಶಿಕ್ಷಣ ಮತ್ತು ಉಪನಿದೇರ್ಶಕ ಯೋಗೇಶ್, ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ತರಬೇತುದಾರ ಉದಯ್‌ಕುಮಾರ್, ಚಂದ್ರವನ ಅಶ್ರಮ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಹಿಪ್ಪೊಕ್ಯಾಂಪಸ್ ನಿದೇರ್ಶಕಿ ರೂಪ, ಜ್ಞಾನ ಕುಟೀರ ಕಾರ್ಯದರ್ಶಿ ಸುಮ, ಕಾರ್ಯದರ್ಶಿ ಹೊನ್ನಪ್ಪ, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಆಶ್ರಮ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಹಾಗೂ ಶಿಕ್ಷಕರು ಸಿಬ್ಬಂದಿವರ್ಗ ಹಾಜರಿದರು.