ರಾಜ್ಯದ 79 ಗ್ರಾಪಂಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ

| Published : Feb 20 2024, 01:45 AM IST

ಸಾರಾಂಶ

ಗ್ರಾಮೀಣ ಗ್ರಂಥಾಲಯಗಳ ಸಬಲೀಕರಣದ ಭಾಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಹಾಗೂ ಸ್ವಯಂ ಸೇವಾ ಸಂಘಗಳು ಶಿಕ್ಷಣ ಇಲಾಖೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ರಾಜ್ಯದ ಆಯ್ದ 20 ಜಿಲ್ಲೆಗಳಲ್ಲಿ 74 ತಾಲೂಕುಗಳಲ್ಲಿ ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿಯನ್ನು ಆಯ್ದುಕೊಂಡು ಸರ್ಕಾರಿ ಶಾಲೆಯ 6 ರಿಂದ 9ನೇ ತರಗತಿಯ 100 ಜನ ಮಕ್ಕಳಿಗೆ ದಿನದ ವಸತಿ ರಹಿತ ಮಕ್ಕಳ ಸಾಹಿತ್ಯ ಸಂಭ್ರಮ ಶಿಬಿರ ಆಯೋಜಿಸಲಾಗಿದೆ.

ದೇವರಾಜು ಕಪ್ಪಸೋಗೆಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮೀಣ ಗ್ರಂಥಾಲಯಗಳ ಸಬಲೀಕರಣದ ಭಾಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಹಾಗೂ ಸ್ವಯಂ ಸೇವಾ ಸಂಘಗಳು ಶಿಕ್ಷಣ ಇಲಾಖೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ರಾಜ್ಯದ ಆಯ್ದ 20 ಜಿಲ್ಲೆಗಳಲ್ಲಿ 74 ತಾಲೂಕುಗಳಲ್ಲಿ ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿಯನ್ನು ಆಯ್ದುಕೊಂಡು ಸರ್ಕಾರಿ ಶಾಲೆಯ 6 ರಿಂದ 9ನೇ ತರಗತಿಯ 100 ಜನ ಮಕ್ಕಳಿಗೆ ದಿನದ ವಸತಿ ರಹಿತ ಮಕ್ಕಳ ಸಾಹಿತ್ಯ ಸಂಭ್ರಮ ಶಿಬಿರ ಆಯೋಜಿಸಲಾಗಿದೆ.

ಚಾಮರಾಜನಗರ ತಾಲೂಕಿನ ಮಂಗಲ ಗ್ರಾಪಂನಲ್ಲಿ ಫೆ.21 ರಿಂದ 23, ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ಫೆ.20 ರಿಂದ 22, ಯಳಂದೂರು ತಾಲೂಕಿನ ದುಗ್ಗಹಟ್ಟಿಯಲ್ಲಿ ಫೆ.21 ರಿಂದ 23 ಮತ್ತು ಹನೂರು ತಾಲೂಕಿನ ರಾಮಾಪುರ ಗ್ರಾಪಂನಲ್ಲಿ ಫೆ.20ರಿಂದ 22ರವರಗೆ ಮಕ್ಕಳ ಸಾಹಿತ್ಯ ಸಂಭ್ರಮ ಶಿಬಿರ ಆಯೋಜಿಸಲಾಗಿದೆ. ಮೂರು ದಿನಗಳ ಶಿಬಿರಕ್ಕೆ 100 ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅದರಲ್ಲಿ ಶೇ. 50ರಷ್ಟು ಬಾಲಕಿಯರು ಇರಬೇಕು. ಎಲ್ಲಾ ಜನಸಮುದಾಯದ ಮಕ್ಕಳಿಗೂ ಅವಕಾಶ ಕಲ್ಪಿಸುವುದರ ಜೊತೆಗೆ ವಿಶೇಷ ಚೇತನ ಮಕ್ಕಳಿಗೂ ಆದ್ಯತೆ ನೀಡಬೇಕು. ಶಿಬಿರ ನಡೆಯುವ ಗ್ರಾಪಂ ಕೇಂದ್ರದ ಶಾಲೆಯಿಂದ 50 ಮತ್ತು ಸುತ್ತಮುತ್ತಲ ಗ್ರಾಪಂಗಳಿಂದ 50 ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದ ಚಟುವಟಿಕೆಗಳಿಗೆ ಬೇಕಾದ ಸಾಮಾಗ್ರಿಗಳ ಕಿಟ್‌, ಡ್ರಾಯಿಂಗ್‌ ಹಾಳೆಗಳು, ಸ್ಕೇಚ್‌ ಪೆನ್‌, ಮುಖವಾಡಗಳು, ಗೊಂಬೆಗಳು ಹಾಗೂ ಶಿಬಿರಕ್ಕೆ ಬೇಕಾಗುವ ಇತರೆ ಸಾಧನ ಸಲಕರಣೆಗಳನ್ನು ಗ್ರಾಪಂ ವತಿಯಿಂದ ಪೂರೈಕೆ ಮಾಡಲಾಗುತ್ತದೆ. ಶಿಬಿರದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕಥೆ, ಕವಿತೆ, ನಾಟಕಗಳನ್ನು ಅಭಿನಯಿಸುವುದು ವಾಚನ ಮಾಡಲು ಬರೆಯಲು ಪ್ರೇರೆಪಿಸಲಾಗುವುದು. ಮಕ್ಕಳು ತಮ್ಮ ಅನುಭವಗಳನ್ನು ಕನಸುಗಳು-ಕಲ್ಪನೆಗಳನ್ನು ಅಭಿವ್ಯಕ್ತಪಡಿಸುವುದು ಮತ್ತು ಪ್ರಬಂಧ, ಚರ್ಚೆ, ನಾಟಕ ಹಾಗೂ ಬರಹ ರೂಪದಲ್ಲೂ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಈ ಶಿಬಿರದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಶಿಬಿರದಲ್ಲಿ ಮಕ್ಕಳು ಅಭಿವ್ಯಕ್ತಪಡಿಸುವ ಚಟುವಟಿಕೆಗಳನ್ನು ಶಿಬಿರದ ಕೊನೆಯ ದಿವಸ ವೇದಿಕೆಯಲ್ಲಿ ಪ್ರದರ್ಶಿಸುವುದು ದಾಖಲೀಕರಣ ಮಾಡಿ ರಾಜ್ಯ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪುಸ್ತಕ ರೂಪದಲ್ಲಿ ಹೊರತರುವುದು ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಶಿಬಿರದಿಂದ ಇಬ್ಬರ ಆಯ್ಕೆ:

ಪ್ರತಿ ಶಿಬಿರದಿಂದ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ ಉಡುಪಿಯಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಕಾರ್ಯಕ್ರಮ ಶಿಪಾರಸ್ಸು ಮಾಡಲಾಗುವುದು. ಮಕ್ಕಳ ಸಾಹಿತ್ಯ ಸಂಭ್ರಮದ ಚಟುವಟಿಕೆಗಳಿಗೆ ಮತ್ತು ಕಾರ್ಯಕ್ರಮವನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಪರಿಣಿತ ಶಿಕ್ಷಕರಿಗ ಎಸ್.ಐ.ಆರ್.ಡಿ. ಮೈಸೂರು ಸಂಸ್ಥೆಯಿಂದ ವಿವಿಧ ಹಂತದಲ್ಲಿ ತರಬೇತಿಯನ್ನು ನೀಡಲಾಗಿದ್ದು, ಸದರಿ ಸಂಪನ್ಮೂಲ ಶಿಕ್ಷಕರು ಪ್ರ- ತಾಲೂಕಿಗೆ ನಿಯೋಜಿಸಲಾಗಿದ್ದು, ಸದರಿ ಸಂಪನ್ಮೂಲ ಶಿಕ್ಷಕರು ಸ್ಥಳಿಯ ಆಡಳಿತ ಮತ್ತು ವಿವಿಧ ಇಲಾಖೆಯ ಸಹಯೋಗದೊಂದಿಗೆ ದಿನದ ತರಬೇತಿ ಚಟುವಟಿಕೆಗಳನ್ನು ನಡೆಸಲು ತಾಂತ್ರಿಕ ನೆರವು ನೀಡಲಿದ್ದಾರೆ.ಮಕ್ಕಳ ಸಾಹಿತ್ಯ ಸಂಭ್ರಮವನ್ನು ನಡೆಸಲು ಜಿಲ್ಲಾ ಮಟ್ಟದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ, ತಾಲೂಕು ಮಟ್ಟದಲ್ಲಿ ತಾಪಂ ಸಹಾಯಕ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಇವರು ವಿವಿಧ ಹಂತದಲ್ಲಿ ಸಭೆಗಳನ್ನು ನಡೆಸಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ದಪಡಿಸಿದ್ದಾರೆ.

ಮಕ್ಕಳಲ್ಲಿ ಕಥೆ, ಕವನ ರಚನೆ, ನಾಟಕ ರಚನೆ, ವರದಿಗಾರಿಕೆ, ಮತ್ತು ನಿರ್ದೇಶನ ಇತ್ಯಾದಿ ಸೃಜನಶೀಲತೆಯನ್ನು ಹೆಚ್ಚಿಸಲು ಇಂತಹ ಶಿಬಿರಗಳು ಅವಶ್ಯಕ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಕೆ. ಬಿ.ಪ್ರಭುಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ, ಚಾಮರಾಜನಗರ.