ಸಾರಾಂಶ
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ
ಕನ್ನಡಪ್ರಭ ವಾರ್ತೆ ಗದಗಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದವರು ಜನಪದ ತಾಯಂದಿರು. ಹಾಡು, ಮೌಲ್ಯಯುತ ಕತೆಗಳ ಮೂಲಕ ಮಕ್ಕಳ ಮನಸ್ಸನ್ನು ಕಟ್ಟುವ ಕಾರ್ಯ ಮಾಡಿದರು. ಅರಸರ ಆಶ್ರಯದಲ್ಲಿ ಬೆಳೆದ ಕನ್ನಡ ಸಾಹಿತ್ಯದಲ್ಲಿ ಮಕ್ಕಳಿಗೆ ಪೂರಕವಾದ ಸಾಹಿತ್ಯ ಬೆಳೆದು ಬರದೇ ಇದ್ದರೂ ನಂತರ ಸಂದರ್ಭದಲ್ಲಿ ಅವಕಾಶ ದೊರಕಿರುವದು ಕಂಡು ಬರುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಪುಸ್ತಕ ಓದುವ ಅವಕಾಶ ದೊರೆತರೆ ಮಕ್ಕಳು ಸರ್ವತೋಮುಖವಾಗಿ ವಿಕಾಸ ಹೊಂದಬಲ್ಲರು ಎಂದು ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಜಿಲ್ಲಾ ಕಸಾಪ ಕಾರ್ಯಾಲಯ ಗದಗದಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮಕ್ಕಳ ಸಾಹಿತ್ಯ ಕುರಿತು ಮಾತನಾಡಿದರು.ಕನ್ನಡದಲ್ಲಿ 1862 ರಲ್ಲಿ ಹೊರ ಬಂದ ಬಾಲಗೀತೆಗಳು ಎನ್ನುವ ಮೊದಲ ಸಂಕಲನ ಸಿದ್ದಪಡಿಸಿ ಜಿ.ಮ್ಯಾಕ್ ಅವರು ಕೆರೋಡಿ ಸುಬ್ಬರಾಯರು ಎಸ್.ಜಿ. ನರಸಿಂಹಚಾರ್ಯರು ಇಂಗ್ಲಿಷ ಭಾಷೆಯಿಂದ ಮಕ್ಕಳಿಗಾಗಿ ಕೆಲವು ಕವಿತೆ ಅನುವಾದಿಸಿದರು. 19 ನೇ ಶತಮಾನದ ಉತ್ತರಾರ್ಧದಲ್ಲಿ ಮಕ್ಕಳಿಗೆಂದೆ ಸಿದ್ಧಪಡಿಸಿದ ಪುಸ್ತಕಗಳಲ್ಲಿ,ವಾಚಿಕೆಗಳಲ್ಲಿ ಮಕ್ಕಳ ಕವಿತೆಗಳು ಕಂಡುಬರುತ್ತವೆ. ಈ ಪ್ರಯತ್ನಗಳಲ್ಲಿ ಕ್ರೈಸ್ತ ವಿಷನರಿಗಳ ಪಾತ್ರ ಶ್ಲಾಘನೀಯವಾದುದು. ಪಂಜೆ ಮಂಗೇಶರಾಯರು, ಹೊಯಿಸಳ, ಜಿ.ಪಿ. ರಾಜರತ್ನಂ ಮೂವರನ್ನು ಮಕ್ಕಳ ಸಾಹಿತ್ಯದ ರತ್ನತ್ರಯರು ಎನ್ನಬಹುದಾಗಿದೆ. ಕುವೆಂಪು, ಶಿವರಾಮ ಕಾರಂತ, ದಿನಕರ ದೇಸಾಯಿ, ರಾಘವ, ಎಲ್. ಗುಂಡಪ್ಪ ಮೆವುಂಡಿ ಮಲ್ಲಾರಿ, ಸಿದ್ದಯ್ಯ ಪುರಾಣಿಕ, ತೋನ್ಸೆ ಮಂಗೇಶರಾವ್ ಸಿ.ಫ.ಕಟ್ಟಿಮನಿ ಮೊದಲಾದವರು ಕವಿತೆಗಳನ್ನು ರಚಿಸಿ ಮಕ್ಕಳನ್ನು ಖುಷಿಪಡಿಸಿದರು. ಇಂಥ ಹಿರಿಯರೆಲ್ಲ ಬಿತ್ತಿದ ನೆಲಕ್ಕೆ ನೀರೆರೆದು ಪೋಷಿಸಿದವರು. ಶಂಗು ಬಿರಾದಾರ ಕಯ್ಯಾರ ಕಿಞ್ಞಣ್ಣ ರೈ, ಸಿಸು ಸಂಗಮೇಶ, ಬಿ.ಎ.ಸನದಿ, ರಸಿಕ ಪುತ್ತಿಗೆ, ಈಶ್ವರ ಕಮ್ಮಾರ, ಚನ್ನವೀರ ಕಣವಿ, ಕಂಚ್ಯಾಣಿ ಶರಣಪ್ಪ, ಎಚ್.ಎಸ್. ವೆಂಕಟೇಶಮೂರ್ತಿ,ಎಂ.ವಿ.ಸೀತಾರಾಮಯ್ಯ ಮೊದಲಾದವರಾಗಿದ್ದಾರೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮನೆ ಮತ್ತು ಶಾಲೆಗಳಲ್ಲಿ ಸಾಹಿತ್ಯದ ಓದು ಮತ್ತು ರಚನೆಗೆ ಅವಕಾಶ ಕಲ್ಪಿಸುವ ಶಿಕ್ಷಣ ವ್ಯವಸ್ಥೆ ರೂಪಗೊಳ್ಳಬೇಕು. ಒಂದೇ ಪಠ್ಯಪುಸ್ತಕ ಓದುವ ಬದಲು ಸಣ್ಣ ಸಣ್ಣ ಅನೇಕ ಪುಸ್ತಕ ಓದುವ ಅವಕಾಶ ದೊರೆಯಬೇಕು. ಭಾಷಾ ಪರೀಕ್ಷೆಗಳ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಮಕ್ಕಳು ಇಂದು ಅಂಕಗಳಿಕೆಯ ವಸ್ತುಗಳಾಗಿದ್ದಾರೆ. ಶಾಲೆಗಳು ಅಂಕಗಳನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗಿರುವದರಿಂದ ಮಕ್ಕಳು ಸೃಜನಶೀಲರಾಗಿ ಬೆಳೆದು ಬರುವ ಅವಕಾಶ ಕ್ಷೀಣಿಸಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತೈಲವರ್ಣದ ಭುವನೇಶ್ವರಿ ಚಿತ್ರ ರಚಿಸಿದ ಖ್ಯಾತ ಚಿತ್ರಕಲಾವಿದ ಸಿ.ಎನ್. ಪಾಟೀಲ ಅವರ ಮಗಳಾದ ಲಲಿತಾ ಪಾಟೀಲ ಇವರನ್ನು ಸನ್ಮಾನಿಸಲಾಯಿತು. ಸಂಗೀತ ಕಲಾವಿದ ಮಹೇಶ ಕುಂದ್ರಾಳ ಹಿರೇಮಠ ಇವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನೆರವೇರಿತು. ವೇದಿಕೆ ಮೇಲೆ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು. ಡಿ. ಎಸ್. ನಾಯಕ ನಿರೂಪಿಸಿದರು. ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.