ಮಕ್ಕಳ ರಂಗಭೂಮಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ: ಡಾ.ಬಲ್ಲಾಳ್‌

| Published : Apr 24 2025, 12:03 AM IST

ಸಾರಾಂಶ

ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಏ.12ರಿಂದ 20ರವರೆಗೆ 12ರಿಂದ 15 ವರ್ಷದ ರಂಗಾಸಕ್ತ ಮಕ್ಕಳಿಗಾಗಿ ಖ್ಯಾತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ನಡೆದ ‘ರಂಗ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಂಗಭೂಮಿ ಚಟುವಟಿಕೆಗಳಿಗೆ ಅಂಬಲಪಾಡಿ ದೇವಳದ ವತಿಯಿಂದ ಧರ್ಮದರ್ಶಿ ಅಣ್ಣಾಜಿ ಬಲ್ಲಾಳರ ಕಾಲದಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸಲು ಇಂತಹ ಚಟುವಟಿಕೆಗಳು ಬೇಕು. ಹೆತ್ತವರು ಇಂತಹ ರಂಗಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಏ.12ರಿಂದ 20ರವರೆಗೆ 12ರಿಂದ 15 ವರ್ಷದ ರಂಗಾಸಕ್ತ ಮಕ್ಕಳಿಗಾಗಿ ಖ್ಯಾತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ನಡೆದ ‘ರಂಗ ತರಬೇತಿ ಶಿಬಿರ’ದ ಸಮಾರೋಪದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಭೂಮಿ ಉಡುಪಿ ತನ್ನ 60ನೇ ಸಂಭ್ರಮಾಚರಣೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ರಂಗ ಶಿಕ್ಷಣ ಯೋಜನೆಗೆ ಶಿಕ್ಷಣ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಸಾಲಿನಲ್ಲಿ ಈ ಯೋಜನೆಯನ್ನು ಸುಮಾರು 20 ಶಾಲೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದರು.

ರಂಗಭೂಮಿ ಉಡುಪಿ ಯಶಸ್ವಿ 60 ವರ್ಷಗಳನ್ನು ಪೂರೈಸಿದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಲು ರಂಗಭೂಮಿಯನ್ನು ಬೆಳೆಸುವವರು ಬೇಕು. ಹೀಗಾಗಿ ಶಾಲಾ ಮಕ್ಕಳಿಗೆ ರಂಗ ತರಬೇತಿ ನೀಡಿದರೆ ಅವರು ಭವಿಷ್ಯದ ರಂಗಕರ್ಮಿಗಳಾಗುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ರಂಗ ಶಿಕ್ಷಣ, ಯಕ್ಷಗಾನ, ಜಾನಪದ ಮೊದಲಾದ ಕೌಶಲಗಳನ್ನು ಕಲಿಯಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.

ಶಿಬಿರದ ನಿರ್ದೇಶಕ ವಿದ್ದು ಉಚ್ಚಿಲ್ ಮಾತನಾಡಿ, ನಾವು ಬೇರೆ ಬೇರೆ ಕಡೆಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳೊಂದಿಗೆ ರಂಗಭೂಮಿ ಚಟುವಟಿಕೆ ಮಾಡಿಕೊಂಡು ಬಂದಿದ್ದೇವೆ. ಎಲ್ಲಿಯೂ ನಾವು ಅವರ ಮೇಲೆ ಒತ್ತಡ ಹಾಕದೆ, ಅವರೊಂದಿಗೆ ಬೆರೆತು ಅವರಲ್ಲಿರುವ ಪ್ರತಿಭೆ ಹೊರತರಲು ಪ್ರಯತ್ನಿಸಿದ್ದೇವೆ. ಧಾರ್ಮಿಕ ಕ್ಷೇತ್ರಗಳು ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದರೆ ರಂಗಭೂಮಿಗೆ ಹೆಚ್ಚಿನ ಬಲ ತುಂಬಿದoತಾಗುತ್ತದೆ ಎಂದರು.

ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಕ್ಕಳ ಮನಸ್ಸು ಖಾಲಿ ಹಾಳೆಯಿದ್ದಂತೆ. ಹೀಗಾಗಿ ಅವರಿಗೆ ಸರಿಯಾದ ತಿಳಿವಳಿಕೆ, ಜ್ಞಾನ ಕೊಡಬೇಕಾಗುತ್ತದೆ. ಇಲ್ಲಿ ಯಾವುದೇ ಜಾತಿ, ಮತ, ಪಂಥದ ಹಂಗಿಲ್ಲದೆ ಕೇವಲ ನಾಟಕ, ರಂಗಭೂಮಿ ಚಟುವಟಿಕೆಯನ್ನಷ್ಟೇ ಕಲಿಸಲಾಗುತ್ತದೆ. ಈ ಮೂಲಕ ರಂಗಭೂಮಿಗೆ ಮುಂದಿನ ತಲೆಮಾರನ್ನು ಸೃಷ್ಟಿಸುವ ಕೆಲಸವಾಗುತ್ತಿದೆ ಎಂದರು.

ಶಿಬಿರದ ರಂಗನಿರ್ದೇಶಕ ವಿದ್ದು ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು.

ಅಮಿತಾಂಜಲಿ ಕಿರಣ್ ನಿರೂಪಿಸಿದರು.