ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಂಡಿರಬೇಕು. ತಮ್ಮ ಬಾಲ್ಯದ ಕೆಲ ದಿನಗಳನ್ನು ಹಬ್ಬದ ರೂಪದಲ್ಲಿ ಕಳೆಯಬೇಕು. ಜೊತೆಗೆ ತಮ್ಮ ಸಮೂದಾಯವನ್ನು ಬೆಳಗುವ ಜ್ಯೋತಿಯಾಗಬೇಕು ಎಂದು ಲೋಯೊಲ್ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ ಜೇಸನ್ ಕರೆ ನೀಡಿದರು.

ಹಾನಗಲ್ಲ:ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಂಡಿರಬೇಕು. ತಮ್ಮ ಬಾಲ್ಯದ ಕೆಲ ದಿನಗಳನ್ನು ಹಬ್ಬದ ರೂಪದಲ್ಲಿ ಕಳೆಯಬೇಕು. ಜೊತೆಗೆ ತಮ್ಮ ಸಮೂದಾಯವನ್ನು ಬೆಳಗುವ ಜ್ಯೋತಿಯಾಗಬೇಕು ಎಂದು ಲೋಯೊಲ್ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸೆಂಟ ಜೇಸನ್ ಕರೆ ನೀಡಿದರು. ಪಟ್ಟಣದ ಲೋಯೋಲ ವಿಕಾಸ ಕೇಂದ್ರದಲ್ಲಿ ವಿಶ್ವ ಮಕ್ಕಳ ದಿನಾಚರಣೆಯ ಪ್ರಯುಕ್ತ, ಸಮಗ್ರ ಮತ್ತು ಸುಸ್ಥಿರ ಯೋಜನೆಯ ಅಡಿಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಯೋಜಿಸಿದ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೀಪವಿದ್ದಂತೆ ಪ್ರಜ್ಜಲವಾಗಿ ಬೆಳೆಯುವ ಮೂಲಕ ತಮ್ಮ ಮನೆ, ಸಮೂದಾಯವನ್ನು ಬೆಳಗಿಸಲಿ ಎಂದರು.

ಮುಂಡಗೋಡಿನ ಲೊಯೋಲ ಸಂಸ್ಥೆಗಳ ಮುಖ್ಯಸ್ಥರಾದ ಫಾ. ಮೇಲ್ವಿನ್ ಲೋಬೊ ಮಾತನಾಡಿ, ಮಕ್ಕಳು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ ತುಂಬಾ ಮುಖ್ಯ. ಅದನ್ನು ಶುದ್ಧ ಮನಸ್ಸಿನಿಂದ ಕಲಿಯಬೇಕು, ಆಸಕ್ತಿ ಮತ್ತು ದೃಢ ವಿಶ್ವಾಸದಿಂದ ಎಲ್ಲಾ ತರಹದ ವಿದ್ಯೆಯನ್ನು ಕಲಿತಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ರವಿಬಾಬು ಪೂಜಾರ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲಕೊಡುವುದು ಖಚಿತ ಎಂದ ಅವರು, ಮಕ್ಕಳ ಹಕ್ಕುಗಳ, ಶಿಕ್ಷಣದ ಹಕ್ಕು ಮತ್ತು ಬದುಕುವ ಹಕ್ಕಿನ ಬಗ್ಗೆ ವಿವರಿಸಿದರು. ಮಕ್ಕಳಿಗಾಗಿ ಇರುವ ಕಾನೂನಿನ ಬಗ್ಗೆ ತಿಳಿಸಿ, ಪೋಕ್ಸೋ ಕಾಯ್ದೆಯ ಬಗ್ಗೆ ವಿವರಿಸಿದರು.ಮಕ್ಕಳ ಬುದ್ಧಿಮಟ್ಟ ಹೆಚ್ಚಿಸಲು ಸಂಸ್ಥೆಯ ಆವರಣದಲ್ಲಿ 10 ವಿಭಿನ್ನ ಆಟವನ್ನು ಏರ್ಪಡಿಸಲಾಗಿತ್ತು. ಮಕ್ಕಳು ಸಂತೋಷದಲ್ಲಿ ಪಾಲ್ಗೊಂಡರು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧತೆಯಲ್ಲಿ ಏಕತೆ ತೋರುವ ಹಲವಾರು ವೇಷಭೂಷಣ, ನೃತ್ಯ, ನಾಟಕ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆದವು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕ ಜೇಸನ್ ಪಾಯ್ಸ್, ಕಾರ್ಯಕ್ರಮದ ಸಂಯೋಜಕರಾದ ಪಿರಪ್ಪ ಶಿರ್ಶಿ ಮತ್ತು ಸಿಬ್ಬಂದಿ ವರ್ಗದವರು, 14 ಸಮುದಾಯ ಕಲಿಕಾ ಕೇಂದ್ರದ ಶಿಕ್ಷಕಿಯರು, ಸುಮಾರು 188 ಮಕ್ಕಳು ಭಾಗವಹಿಸಿದ್ದರು.