ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪುಸ್ತಕ ಹಿಡಿಯುವ ಮಕ್ಕಳ ಕೈಗಳಲ್ಲಿ ಮೊಬೈಲ್ ಕಂಡುಬರುತ್ತಿದೆ. ಮಕ್ಕಳು ಜಾಲತಾಣವನ್ನು ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಸಿವ್ಹಿಲ್ ನ್ಯಾಯಾಧೀಶ ಅಮಿತ ಘಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪುಸ್ತಕ ಹಿಡಿಯುವ ಮಕ್ಕಳ ಕೈಗಳಲ್ಲಿ ಮೊಬೈಲ್ ಕಂಡುಬರುತ್ತಿದೆ. ಮಕ್ಕಳು ಜಾಲತಾಣವನ್ನು ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಸಿವ್ಹಿಲ್ ನ್ಯಾಯಾಧೀಶ ಅಮಿತ ಘಟ್ಟಿ ಹೇಳಿದರು.ಪಟ್ಟಣದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಜಾಲತಾಣವನ್ನು ಅವಲಂಬಿಸಿರುವ ಪ್ರತಿಯೊಬ್ಬರೂ ಅಪಾಯವನ್ನು ತಂದುಕೊಂಡಂತೆ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳಿಗೆ ಸುರಕ್ಷಿತವಾದ ಆನ್ಲೈನ್ ಬಳಕೆಯ ಬಗ್ಗೆ ತಿಳಿಸಿಕೊಡಬೇಕು. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಫೋಟೋ ದುರ್ಬಳಕೆಯಾಗುತ್ತದೆ ಎಂದರು.
ವಕೀಲ ಕೆ.ಜಿ.ಕಂದಗಲ್ಲ ಮಾತನಾಡಿ, ಸುರಕ್ಷಿತ ಕ್ಲಿಕ್, ಸುರಕ್ಷಿತ ಬಾಲ್ಯ ಎಂಬುದು ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಆನ್ಲೈನ್ ಸುರಕ್ಷತೆ, ಸೈಬರ್ ಜಾಗೃತಿ ಮತ್ತು ಡಿಜಿಟಲ್ ಶಿಕ್ಷಣದ ಮಹತ್ವವನ್ನು ಸಾರುವದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.ಸಿವಿಲ್ ನ್ಯಾಯಾಧೀಶ ಈರಪ್ಪ ಡವಳೇಶ್ವರ ಮಾತನಾಡಿ, ವೈಯಕ್ತಿಕ ಮಾಹಿತಿ ರಕ್ಷಣೆ, ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ಯಾವುದೇ ಸೈಬರ್ ಅಪರಾಧ ಅಥವಾ ವಂಚನೆಗೆ ಒಳಗಾದರೆ, ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಮಾತನಾಡಿ, ಶಿಕ್ಷಣ ಇಲಾಖೆ ಹೊರತಂದಿರುವ ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವನ್ನು ಶಾಲೆ ಎಲ್ಲ ಶಿಕ್ಷಕರು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಹಾಗೂ ಸೈಬರ್ ವಂಚನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆಯನ್ನು ಉಪತಹಶೀಲ್ದಾರ ಬಿ.ಆರ್.ಪೋಲೇಶಿ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಕೋಲಕಾರ, ಶಿಶು ಅಭಿವೃದ್ಧಿ ಯೋಜನಾ ಸಹಾಯಕ ಅಧಿಕಾರಿ ಬಿ.ಎಸ್.ನೀಲುಗಲ್, ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ ಇತರರು ಇದ್ದರು. ಈ ವೇಳೆ ವಿದ್ಯಾರ್ಥಿಗಳು ಸುರಕ್ಷಿತ ಕ್ಲಿಕ್, ಸುರಕ್ಷಿತ ಬಾಲ್ಯ ವಿಷಯದಡಿ ಕಿರು ನಾಟಕ ಪ್ರದರ್ಶಿಸಿದರು.