ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಉಲ್ಲಾಸ, ಶಿಸ್ತು, ಸಂವಹನ ಇರಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಉಲ್ಲಾಸ, ಶಿಸ್ತು, ಸಂವಹನ ಇರಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಆಯೋಜಿಸಿದ್ದ ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಶೈಕ್ಷಣಿಕ ವಾತಾವರಣ ಉತ್ತಮಗೊಳ್ಳುತ್ತಿದೆ. ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಸ್ಪಂದನೆ ನೀಡುತ್ತಿದ್ದಾರೆ. ಎಲ್ಲರೂ ಸೇರಿ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸೋಣ ಈ ನಿಟ್ಟಿನಲ್ಲಿ ಮೈಸೂರು ಎಜುಕೇಷನ್ ಅಕಾಡೆಮಿ ಕೈಜೋಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು.ಇಂತಹ ಕಾರ್ಯಾಗಾರಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಯ ಭಯವನ್ನು ಇಲ್ಲವಾಗಿಸುತ್ತವೆ. ಮಕ್ಕಳು ಪರೀಕ್ಷಾ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ತಾಳ್ಮೆಯಿಂದ ಓದಬೇಕು. ದಿನಕ್ಕೆ ಏಳುಗಂಟೆಯಾದರೂ ಮಲಗಬೇಕು. ಪರೀಕ್ಷೆಗಾಗಿ ಓದುವುದರ ಹೊರತಾಗಿ ಬೇರೆ ಪುಸ್ತಕಗಳನ್ನು ಸ್ವಲ್ಪವಾದರೂ ಓದುಬೇಕು. ಯಾವುದೂ ಕಷ್ಟವಲ್ಲ ನಾವು ಕೂಡ ಸಾಮಾನ್ಯ ವರ್ಗದಿಂದಲೇ ಬಂದವರು. ಆದರೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು. ನೀವು ಕೂಡ ತಾವು ಓದಿದ್ದನ್ನು ಬೇರೆಯವರ ಜೊತೆ ಹಂಚಿಕೊಳ್ಳಿ ಆಗ ನಿಮಗೆ ಪಠ್ಯ ಸುಲಭವಾಗಿ ಅರ್ಥವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಜಿ.ಪಂ. ಸಿಇಓ ಎನ್. ಹೇಮಂತ್ ಮಾತನಾಡಿ, ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ನಾಲ್ಕು ಮಾಡೆಲ್ ಪ್ರಶ್ನೆ ಪತ್ರಿಕೆಗಳಿವೆ. ಈ ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಉತ್ತರ ಬರೆಯಿರಿ ಜೊತೆಗೆ ಮುಂದೆ ಬರಲಿರುವ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸಿ ಆಗ ನಿಮಗೆ ಏಳು ಪ್ರಶ್ನೆ ಪತ್ರಿಕೆಗಳು ನಿಮ್ಮ ಕೈಯಲ್ಲಿರುತ್ತವೆ. ಈ ಪ್ರಶ್ನೆ ಪತ್ರಿಕೆಗಳನ್ನು ಬಿಟ್ಟು ಬೇರೆ ಪ್ರಶ್ನೆಗಳು ಬರಲು ಸಾಧ್ಯವೇ ಇಲ್ಲ. ಪರೀಕ್ಷೆ ಸಮಯದಲ್ಲಿ ಕಡಿಮೆ ಓದಿ ರಿವಿಜನ್ ಹೆಚ್ಚು ಮಾಡಿ ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಹಾಗೂ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಶಿವಮೊಗ್ಗದಲ್ಲಿ ಒಂದು ಶೈಕ್ಷಣಿಕ ವಾತಾವರಣವನ್ನು ಸೇವೆಯ ಮೂಲಕ ನಿರ್ಮಿಸಬೇಕು ಎಂಬುದು ನಮ್ಮ ಟ್ರಸ್ಟಿನ ಕನಸಾಗಿದೆ. ಹೀಗಾಗಿಯೇ ಈಗ ಚಾಲ್ತಿಯಲ್ಲಿದ್ದ ಅಕಾಡೆಮಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ಗಂಗೋತ್ರಿ ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ. ಉತ್ತಮ ವಾತಾವರಣವಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಅನಕೂಲವಾಗುವಂತೆ ಶುಲ್ಕವನ್ನು ಕೂಡ ನಿಗದಿಪಡಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮತ್ತು ಸಾಕ್ಷಾರತಾ ಇಲಾಖೆಯ ಉಪನಿರ್ದೇಶಕ ಎಸ್.ಆರ್. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್ ಬರವೆ, ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಗಂಗೋತ್ರಿ ಸ್ವತಂತ್ರ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ರೂಪಾ ಪುಣ್ಯಕೋಟಿ, ಪ್ರಾಂಶುಪಾಲ ರೇಣುಕಾರಾಧ್ಯ, ಟ್ರಸ್ಟಿನ ಅಧ್ಯಕ್ಷ ಎನ್.ಬಿ. ಮಂಜುನಾಥ್, ಉಪಾಧ್ಯಕ್ಷ ಬಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಜಗದೀಶ್, ಜಂಟಿ ಕಾರ್ಯದರ್ಶಿ ಡಾ.ಹೆಚ್.ಪಿ. ಇರ್ಫಾನ್ ಅಹಮದ್, ನಿರ್ದೇಶಕರುಗಳಾದ ಎಂ.ಪಿ. ದಿನೇಶ್‌ಪಟೇಲ್, ಚಂದನ್, ರಾಕೇಶ್‌ಗೌಡ, ಪಿ.ಎಸ್. ಗಿರೀಶ್‌ರಾವ್ ಮಾನೆ ಸೇರಿದಂತೆ ಹಲವರಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎ. ಚೇತನ್‌ರಾಮ್, ಸುರೇಶ್ ಕುಲಕರ್ಣಿಯವರು ಮಕ್ಕಳೊಂದಿಗೆ ಸಂವಾದದ ಮೂಲಕ ಉಪನ್ಯಾಸ ನೀಡಿದರು.-----
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮೊಬೈಲ್‌ಗಳನ್ನು ಬಿಟ್ಟುಬಿಡಿ, ಬಿಗ್‌ಬಾಸ್, ಗಿಲ್ಲಿ ಅಂತಾ ನೋಡುತ್ತಾ ಕೂರಬೇಡಿ. ಬೇಗನೆ ಮಲಗಿ ಪ್ರತಿನಿತ್ಯ ವ್ಯಾಯಾಮ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ ಆರೋಗ್ಯದ ಕಡೆ ಗಮನವಿರಲಿ. ಹೀಗೆ ಶ್ರದ್ಧೆಯಿಂದ ಓದಿದರೆ ಯಾವುದೂ ಕಷ್ಟವಲ್ಲ, ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಸಾಮಾನ್ಯ ವಿದ್ಯಾರ್ಥಿಗಳು ಕೂಡ ಪಡೆದು ಉತ್ತೀರ್ಣರಾಗಬಹುದು.ಎನ್.ಹೇಮಂತ್, ಜಿಪಂ ಸಿಇಒ, ಶಿವಮೊಗ್ಗ