ಮಕ್ಕಳಿಗೆ ಜೀವನ ಮೌಲ್ಯಗಳ ಕುರಿತು ಶಿಕ್ಷಣ ನೀಡಬೇಕು : ಎಸ್‌. ಮಂಜು

| Published : Dec 24 2024, 12:45 AM IST

ಸಾರಾಂಶ

ಚಿಕ್ಕಮಗಳೂರು, ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಲಿಕೆಗೆ ಪ್ರೋತ್ಸಾಹಿಸಬೇಕು. ಅಕ್ಷರ ಅಭ್ಯಾಸದ ಜೊತೆಗೆ ಜೀವನ ಮೌಲ್ಯಗಳ ಕುರಿತು ಶಿಕ್ಷಣ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು ಹೇಳಿದರು.

ಮಕ್ಕಳಿಂದ ಅಹವಾಲು ಸ್ವೀಕಾರ- ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಲಿಕೆಗೆ ಪ್ರೋತ್ಸಾಹಿಸಬೇಕು. ಅಕ್ಷರ ಅಭ್ಯಾಸದ ಜೊತೆಗೆ ಜೀವನ ಮೌಲ್ಯಗಳ ಕುರಿತು ಶಿಕ್ಷಣ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು ಹೇಳಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ತೇಗೂರಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ದೇಶದ ಆಸ್ತಿ. ಅವರಿಗೆ ಉತ್ತಮ ವಾತವರಣದಲ್ಲಿ ನೈತಿಕ ಪಾಠಗಳನ್ನು ಉಣಬಡಿಸಿ ಉತ್ತಮ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಮಕ್ಕಳ ಅವಶ್ಯಕತೆಗಳನ್ನು ಅರಿತು ಮೂಲಭೂತ ಅಗತ್ಯಗಳ ಕೊರತೆಯಾಗದಂತೆ ನಿಗಾವಹಿಸಿ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದರು.

ಪ್ರತಿಯೊಬ್ಬ ಮಕ್ಕಳಲ್ಲೂ ವಿನಮ್ರತೆ ಗುಣವಿರಬೇಕು. ತಂದೆ, ತಾಯಿ, ಶಿಕ್ಷಕರು ಹಾಗೂ ಗುರುಗಳನ್ನು ಗೌರವಯುತವಾಗಿ ಕಾಣಬೇಕು. ತಮಗೆ ಶಿಕ್ಷಣ ಹಾಗೂ ಉತ್ತಮ ಜೀವನ ರೂಪಿಸಿಕೊಡಲು ಶ್ರಮಿಸುತ್ತಿರುವ ಪ್ರತಿಯೊಬ್ಬರ ಮೇಲೆ ಕೃತಜ್ಞತಾ ಭಾವನೆಗಳ ಜೊತೆಗೆ ಸಹಾಯ ಮಾಡುವ ಗುಣ ವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕಗಳಿಗಿಂತ ಮೊಬೈಲ್‌ಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಕಾಲಾಹರಣ ಮಾಡುವುದಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 15,572 ಮಕ್ಕಳು ಸೈಬರ್ ಅಪರಾಧಕ್ಕೆ ಒಳಗಾಗಿದ್ದಾರೆ, ಇದು ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ರಾಜ್ಯಾದ್ಯಂತ ಸುಮಾರು 14 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದ್ದಿದಾರೆ ಹಾಗೂ 2497 ಮಕ್ಕಳು ಮಾದಕ ವಸ್ತುಗಳ ಬಳಕೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ. ಇವುಗಳಿಗೆ ಕಾರಣಗಳನ್ನು ಕಲೆಹಾಕಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.

ಮಕ್ಕಳಲ್ಲಿ ತಮ್ಮ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗೆ ಇರುವ ಕಾನೂನುಗಳ ಕುರಿತು ಮಾಹಿತಿ ಇರಬೇಕು. ಯಾವುದೇ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಂತೆ ತಪ್ಪಿಸಲು ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಪ್ರಜ್ಞೆ ಇರಬೇಕು. ರಾಜ್ಯದಲ್ಲಿ ಒಟ್ಟು 10,247 ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ದೌರ್ಜನ್ಯ ವೆಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಮಕ್ಕಳು ಯಾವುದೇ ರೀತಿ ಸಮಸ್ಯೆ ಎದುರಿಸುತ್ತಿದ್ದರೆ ತಾವು ನೇರವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ತಮ್ಮ ದೂರುಗಳನ್ನು ಗೌಪ್ಯವಾಗಿರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ. ಪ್ರತಿಯೊಂದು ಮಗುವಿಗೂ ಜೀವಿಸುವ, ಉತ್ತಮ ಆರೋಗ್ಯ ಸೇವೆ, ಪೌಷ್ಠಿಕ ಆಹಾರ ಪಡೆದು ದೇಶದ ಪ್ರಜೆ ಎಂದು ಗುರುತಿಸಿಕೊಂಡು ಬದುಕುವ ಹಕ್ಕಿದೆ. ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆ ಮನೋರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಕಾಸ ಹೊಂದುವ ಹಕ್ಕಿದೆ. ದಬ್ಬಾಳಿಕೆ ಹಾಗೂ ಲೈಂಗಿಕ ಕಿರುಕುಳ ಹಾಗೂ ಇತರೆ ಸಂಘರ್ಷಗಳಿಂದ ರಕ್ಷಣೆ ಪಡೆಯುವ ಹಕ್ಕುಗಳ ಜೊತೆಗೆ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಸಿ. ಸುರೇಶ್, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಚ್‌.ಸಿ. ಭಾಗೀರಥಿ, ವಸತಿ ಶಾಲೆ ಪ್ರಾಂಶುಪಾಲೆ ಕೆ.ಎಂ. ಸಂಧ್ಯಾ ಉಪಸ್ಥಿತರಿದ್ದರು.

23 ಕೆಸಿಕೆಎಂ 3ತೇಗೂರಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಸಭಾಂಗಣದಲ್ಲಿ ಸೋಮವಾರ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ ಎಸ್.ಮಂಜು, ಮಹಾಂತೇಶ್ ಭಜಂತ್ರಿ, ಕೆ.ಎಂ. ಸಂಧ್ಯಾ, ಭಾಗೀರಥಿ, ಡಾ. ಅಶ್ವಥ್‌ಬಾಬು ಇದ್ದರು.