ಚಿಕ್ಕಮಗಳೂರುಗಂಗಾಮತ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ವರ್ಗದ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಲಹೆ ಮಾಡಿದರು.
-ಜಿಲ್ಲಾ ಗಂಗಾಮತಸ್ಥರ ಸಂಘ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗಂಗಾಮತ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ವರ್ಗದ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಲಹೆ ಮಾಡಿದರು.ಗಂಗಾಮತಸ್ಥರ ಜಿಲ್ಲಾ ಮತ್ತು ತಾಲೂಕು ಸಂಘಗಳು, ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಬಡತನದಿಂದ ಹೊರ ಬರಲು ಶಿಕ್ಷಣ ಅತ್ಯಗತ್ಯ, ಶಿಕ್ಷಣಪಡೆದರೆ ಮಾತ್ರ ಸಮುದಾಯ ಅಭಿವೃದ್ಧಿ ಹೊಂದುತ್ತದೆ, ವಿದ್ಯಾ ವಂತರನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಸ್ಥಾನಮಾನ ನೀಡುತ್ತದೆ ಎಂದು ಕಿವಿಮಾತು ಹೇಳಿದರು.ಗಂಗಾಮತ ಸಮುದಾಯದ ಮಕ್ಕಳು ಇದನ್ನು ಅರ್ಥಮಾಡಿಕೊಳ್ಳಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು. ಗಂಗಾಮತಸ್ಥರು ಸಮಾಜದ ಅಭಿವೃದ್ಧಿಗೆ ಸಂಘಟಿತರಾಗಬೇಕು ಎಂದು ತಿಳಿಸಿದರು.ಗಂಗಾಮತ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಸ್ವಾಮೀಜಿ ಜನವರಿ 14 ಮತ್ತು 15 ರಂದು ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಶೋಷಿತ ವರ್ಗದ ಮಕ್ಕಳು ಶಿಕ್ಷಣ ಪಡೆಯಬೇಕು, ವಿದ್ಯಾವಂತರಾದರೆ ಮಾತ್ರ ಶೋಷಿತರೆಂಬ ಹಣೆಪಟ್ಟಿ ಇಲ್ಲವಾಗುತ್ತದೆ. ವಿದ್ಯಾವಂತರಾದರೆ ಮಾತ್ರ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದರು.ಗಂಗಾಮತ ಸಮುದಾಯಕ್ಕೆ ಮಂಜೂರಾಗಿದ ನಿವೇಶನಕ್ಕೆ ಕಾನೂನಿನ ತೊಡಕಿದ್ದು ಅದನ್ನು ಆದಷ್ಟು ಶೀಘ್ರ ಬಗೆಹರಿಸ ಲಾಗುವುದು ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯೆ ಅಮೂಲ್ಯವಾದ ಸಂಪತ್ತು, ಬಹು ದೊಡ್ಡ ಆಸ್ತಿ, ಹಣ ಕಳೆದು ಹೋಗಬಹುದು, ಆದರೆ, ವಿದ್ಯೆ, ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ, ಹಾಗಾಗಿ ನಾವು ಜ್ಞಾನದಾಹಿಗಳಾಗಬೇಕು, ವಿದ್ಯಾವಂತರಾಗಬೇಕು, ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಗಂಗಾಮತ ಸಮುದಾಯಕ್ಕೆ ನಗರದಲ್ಲಿ ನಿವೇಶನವನ್ನು ತಾವು ಶಾಸಕರಾಗಿದ್ದ ವೇಳೆ ನೀಡಲಾಗಿದ್ದು ಅದಕ್ಕೆ ಅಗತ್ಯ ದಾಖಲಾತಿಯನ್ನು ಖಂಡಿತ ಮಾಡಿಕೊಡಲಾಗುವುದು ಎಂಬ ಭರವಸೆ ನೀಡಿದ ಅವರು ನಿವೇಶನದಲ್ಲಿ ನಿರ್ಮಿಸುವ ಭವನಕ್ಕೆಅನುದಾನ ನೀಡುವುದಾಗಿ ತಿಳಿಸಿದರು.
ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ. ಕೃಷ್ಣಯ್ಯ ಮಾತನಾಡಿ, ಗಂಗಾಮತ ಸಮಾಜವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರ್ಪಡೆಗೊಳಿಸುವಂತೆ, ಅದಕ್ಕಾಗಿ ಪ್ರಧಾನಮಂತ್ರಿಗಳ ಬಳಿಗೆ ಸಮುದಾಯದ ಗುರುಗಳ ನೇತೃತ್ವದ ನಿಯೋಗ ಕರೆದುಕೊಂಡು ಹೋಗುವಂತೆ, ರಾಜಕೀಯದಲ್ಲಿ ಸಮುದಾಯಕ್ಕೆ ಪ್ರಾಧಾನ್ಯತೆ ನೀಡು ವಂತೆ ಸಿ.ಟಿ. ರವಿ ಅವರಿಗೆ ಮನವಿ ಮಾಡಿದರು.ಗಂಗಾಮತಸ್ಥರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಧನಂಜಯ ಮಾತನಾಡಿ, ಸಂಘದಿಂದ ನಗರದಲ್ಲಿ ನಿರ್ಮಿಸಿರುವ ದೇವಾಲಯ ಅಭಿವೃದ್ಧಿಗೆ, ಸಮುದಾಯ ಭವನದ ನಿರ್ಮಾಣಕ್ಕೆ ಅನುದಾನ ನೀಡುವಂತೆ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರಿಗೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಂ.ಎಸ್. ವಸಂತಕುಮಾರ್ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಟಿ. ಅಶೋಕ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.ಸುರೇಶ್ ಜಂಬಲದಿನ್ನಿ ತಂಡದಿಂದ ವಚನ ಗಾಯನ ನಡೆಯಿತು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ನಾಯ್ಕ್, ಉದ್ಯಮಿ ಎಸ್. ಚಂದ್ರಶೇಖರ್, ಎರಡೂ ಸಂಘಗಳ ಪದಾಧಿಕಾರಿಗಳಾದ ಎಸ್.ಎಚ್. ವೆಂಕಟೇಶ್, ಎಂ.ಶ್ರೀ ನಿವಾಸ್, ಎ. ಹಾಲೇಶಪ್ಪ, ಕೆ.ಎನ್. ಬಸವರಾಜು, ಹನುಮಂತಪ್ಪ ಬಾರ್ಕೆರ್, ಎಂ.ಆರ್. ಶೇಖರ್, ಜಿ. ಪುಟ್ಟಪ್ಪ, ಎ.ಟಿ. ಧರ್ಮೇಶ್, ಡಿ.ಎಂ.ಯುವರಾಜ್, ಎನ್.ಹೆಚ್. ಮಂಜಪ್ಪ, ವಿಶ್ವನಾಥ್, ಕೆ.ಗಿರೀಶ್, ಕೆ. ಮಂಜುನಾಥ್, ಎಲ್.ಟಿ. ಪ್ರಕಾಶ್, ವೈ.ಎನ್. ಗೋವಿಂದಪ್ಪ ಉಪಸ್ಥಿತರಿದ್ದರು. 30 ಕೆಸಿಕೆಎಂ 3ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.