ಮಕ್ಕಳು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರು ಹಾಗೂ ಪೋಷಕರು ತಣ್ಣೀರು ಎರಚಬಾರದು. ಆ ಕುತೂಹಲದ ಪ್ರಶ್ನೆಗಳೇ ಭವಿಷ್ಯದಲ್ಲಿ ಅವರನ್ನು ಗುರುತಿಸುವಂತೆ ಮಾಡಬಹುದು. ಮಕ್ಕಳ ಮನಸ್ಸಿನಿಂದ ವಿಜ್ಞಾನ ಕಷ್ಟ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದ್ದು, ಶಿಕ್ಷಕರು ಅವರ ಕುತೂಹಲ ಉತ್ತೇಜಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣದಲ್ಲಿ ಇತ್ತೀಚೆಗೆ ಅಂಕಕ್ಕಿಂತ ಕೌಶಲ್ಯಕ್ಕೆ ಮಹತ್ವವಿದ್ದು, ವಿದ್ಯಾರ್ಥಿಗಳನ್ನು ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ. ಮಕ್ಕಳಲ್ಲಿ ನಾವೂ ವಿಜ್ಞಾನಿಗಳಾಗಬಹುದೆಂಬ ಆಶಾಭಾವನೆ ಮೂಡಿಸುವ ಕೆಲಸ ಶಾಲಾ ಮಟ್ಟದಲ್ಲಿ ಆಗಬೇಕಿದೆ ಎಂದು ಸಿ.ಎಫ್.ಟಿ.ಆರ್.ಐನ ನಿವೃತ್ತ ವಿಜ್ಞಾನಿ ಡಾ. ಭಾಗ್ಯಲಕ್ಷ್ಮಿ ತಿಳಿಸಿದರು.ಮೈಸೂರು ವಿಶ್ವ ವಿದ್ಯಾನಿಲಯದ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರವು (ಸಿಎಸ್ಇಎಸ್) ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕಾ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಗಣಿತ ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರು ಹಾಗೂ ಪೋಷಕರು ತಣ್ಣೀರು ಎರಚಬಾರದು. ಆ ಕುತೂಹಲದ ಪ್ರಶ್ನೆಗಳೇ ಭವಿಷ್ಯದಲ್ಲಿ ಅವರನ್ನು ಗುರುತಿಸುವಂತೆ ಮಾಡಬಹುದು. ಮಕ್ಕಳ ಮನಸ್ಸಿನಿಂದ ವಿಜ್ಞಾನ ಕಷ್ಟ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದ್ದು, ಶಿಕ್ಷಕರು ಅವರ ಕುತೂಹಲ ಉತ್ತೇಜಿಸಬೇಕು ಎಂದರು.ವಿಜ್ಞಾನದ ಕುರಿತ ತಪ್ಪು ಕಲ್ಪನೆಯಿಂದ ಹಿಂದೆ ಅನೇಕರು ಕಲಾ, ವಾಣಿಜ್ಯ ವಿಭಾಗಕ್ಕೆ ಸೇರಿಕೊಳ್ಳುತ್ತಿದ್ದರು. ಇದರಿಂದ ಅವರಲ್ಲಿನ ಅನೇಕ ಕುತೂಹಲಗಳು, ವಿಜ್ಞಾನದ ಪ್ರಾಯೋಗಿಕ ಪ್ರಜ್ಞೆ ಹುದುಗಿ ಹೋಗುತ್ತಿತ್ತು. ಇದಕ್ಕಾಗಿ ಸಿಎಸ್ಇಎಸ್ ಮೂಲಕ 2005ರಿಂದ ಎಲ್ಲಾ ಶಾಲೆಗಳಿಗೆ ತೆರಳಿ ಅವರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಗ್ರಾಮೀಣ ಭಾಗದ ಶಾಲೆಗಳಲ್ಲಿ ಅದ್ಭುತವಾಗಿ ಚಿಂತಿಸುವ ಮಕ್ಕಳಿದ್ದಾರೆ. ಅವರಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರಿಸಲು, ನಾವೂ ವಿವಿಧ ಕಡೆಗಳಲ್ಲಿ ಮಾಹಿತಿ ಸಂಗ್ರಹಿಸಬೇಕಾಯಿತು. ಅವರಲ್ಲಿ ವಿಜ್ಞಾನ ಓದಿದರೆ ಇಂಗ್ಲಿಷ್ ಬಳಸಬೇಕೆಂಬ ಹಿಂಜರಿಕೆ ಇದೆ. ಅವರಲ್ಲಿರುವ ಸೂಕ್ಷ್ಮ ಕುತೂಹಲಗಳಿಗೆ ರೆಕ್ಕೆ ಕಟ್ಟುವ ಕೆಲಸ ಮಾಡಿದ್ದೇವೆ. ಈ ಪ್ರಯತ್ನ ಎಲ್ಲಾ ಕಡೆ ನಡೆದರೆ ವಿಜ್ಞಾನ ಮತ್ತಷ್ಟು ಬಲಿಷ್ಠವಾಗುತ್ತದೆ. ಹಾಗೆಯೇ, ವಿಜ್ಞಾನ ಕ್ಷೇತ್ರಕ್ಕೆ ಪ್ರತಿಭಾವಂತರು ಬರುತ್ತಾರೆ ಎಂದರು.ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ಕುರಿತು ಕುತೂಹಲಕಾರಿ ವಿಷಯಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ಉತ್ತರಿಸಿದರು.
ನಿವೃತ್ತ ಪ್ರಾಧ್ಯಾಪಕರಾದ ಡಾ.ಎಸ್. ಶಶಿಕಾಂತ್, ಪ್ರೊ.ಎಸ್.ಎನ್. ಪ್ರಸಾದ್, ಪ್ರೊ. ರಂಗರಾಜನ್, ಭೌತವಿಜ್ಞಾನ ಪ್ರಾಧ್ಯಾಪಕ ಡಾ.ಎಂ.ಎಸ್. ಚಂದ್ರಶೇಖರ್ ಮೊದಲಾದವರು ಇದ್ದರು.