ಸಾರಾಂಶ
ರಾಣಿಬೆನ್ನೂರು: ದೇಶ ಅಭಿವೃದ್ಧಿ ಹೊಂದುವಂತಾಗಲು ಮಕ್ಕಳಿಗೆ ಉತ್ತಮ ಶಿಕ್ಷಣ, ಕೌಶಲ್ಯ ತರಬೇತಿ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಭಾರತದ 41 ಕ್ಲಬ್‌ಗಳ ಒಕ್ಕೂಟದ ನೆರವಿನಿಂದ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ತೆರೆಯಲಾಗುತ್ತಿರುವ 100 ಸ್ಮಾರ್ಟ್ ಕ್ಲಾಸ್‌ಗಳ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಉದ್ಯೋಗ ಗಳಿಸಲು ಪಠ್ಯದ ಜತೆಯಲ್ಲಿ ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುವ ಕೌಶಲ್ಯದ ಅಗತ್ಯವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾವಂತನಿದ್ದರೂ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಅವರನ್ನು ಅವಿದ್ಯಾವಂತರೆಂದು ಪರಿಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ 100 ಸ್ಮಾರ್ಟ್ ಕ್ಲಾಸ್‌ಗಳನ್ನು ಪ್ರಾರಂಭಿಸಲು ಚಾಲನೆ ನೀಡಲಾಗುತ್ತಿದೆ. ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಭಾರತದ 41 ಕ್ಲಬ್‌ಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸು ಸರಸ್ವತಲು ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಿಗೆ ಕಂಠಪಾಠಕ್ಕಿಂತ ವಿಷಯ ಅರಿತು ಅಧ್ಯಯನ ಮಾಡುವ ಪ್ರವೃತ್ತಿ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್‌ಗಳು ಸಹಕಾರಿಯಾಗಿವೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಪಾಸಿಗಾರ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾ. ಗಿರೀಶ ಪದಕಿ, ಬಿಇಒ ಶಾಮಸುಂದರ ಅಡಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಡಿಗರ, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ ನಾಯ್ಕ್, ವಿವೇಕ ಮಠ, ಕಿರಣ ಹೆಬಸೂರ, ಅನುರಾಗ ಮೆಹರ್, ಪ್ರಶಾಂತ ರಾಮನಗೌಡ, ಡಾ.ವಿರುಪಾಕ್ಷಪ್ಪ, ಪರಶುರಾಮ ಸಲಗರ, ಹೇಮಯ್ಯ ಕಾಕೋಳ, ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಮತ್ತಿತರರಿದ್ದರು.